Monday 6 November 2017

@@@ ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ?. @@@


[ ಅಕ್ಬರ ಮತ್ತು ಬೀರಬಲ್ಲನ ಕಥೆಗಳು ]
~~~ ಎಂ. ಗಣಪತಿ ಕಾನುಗೋಡು.
ಅಕ್ಕಸಾಲಿಯೊಬ್ಬ ತನ್ನ ಮಗನಿಗೆ ತಮ್ಮ ಕಸುಬನ್ನು ಹೇಳಿಕೊಡುವ ಮೊದಲು ಅದರ ಮೂಲ ಗುಟ್ಟನ್ನು ಹೇಳಿಕೊಟ್ಟಿದ್ದ. ಯಾರೇ ಬಂಗಾರದ ಒಡವೆಯನ್ನು ಮಾಡಿಸಲು ತಮ್ಮ ಹತ್ತಿರ ಬಂದರೂ ಅದರಲ್ಲಿ ಸ್ವಲ್ಪ ಬಂಗಾರವನ್ನು ಕದಿಯಲೇಬೇಕು. ಇದು ವೃತ್ತಿ ಧರ್ಮ ಎಂದು ಹೇಳಿಕೊಟ್ಟಿದ್ದ. ಅವನ ಪ್ರಕಾರ ಇದು ಆ ಕಸುಬಿನ ಮೂಲಗುಟ್ಟು.
ತನಗೆ ವಯಸ್ಸಾಗಿ ಮಗನಿಗೆ ಅಂಗಡಿಯ ದಂಧೆಯನ್ನು ವಹಿಸಿಕೊಟ್ಟಿದ್ದ. ಆದರೂ ಮೇಲು ಹುಶಾರಿಗಾಗಿ ಅಂಗಡಿಯ ಮೂಲೆಯಲ್ಲಿ ಕುಳಿತುಕೊಂಡು ಮಗನ ವಹಿವಾಟನ್ನು ಗಮನಿಸುತ್ತಿದ್ದ. ತನ್ನ ಮಗ ಯಾರದ್ದೇ ಕೆಲಸಕ್ಕೆ ಅವರಿಂದ ಬಂಗಾರ ಪಡೆದು ಕೆಲಸ ಶುರುಮಾಡಿದ ಕೂಡಲೇ " ರಾಮ ರಾಮಾ ನಿನ್ನ ಕೆಲಸವನ್ನು ಮಾಡು " ಎಂದು ಮಗನಿಗೆ ಬಂಗಾರವನ್ನು ಹೊಡೆದುಕೊಳ್ಳುವ ನೆನಪನ್ನು ಸಾಂಕೇತಿಕವಾಗಿ ನೆನಪು ಮಾಡಿಕೊಡುತ್ತಿದ್ದ.
ಒಂದು ದಿನ ಅವನ ಮಗಳೇ ಒಡವೆ ಮಾಡಿಸಲಿಕ್ಕಾಗಿ ಅವನಲ್ಲಿಗೆ ಗಂಡನ ಮನೆಯಿಂದ ಬಂಗಾರವನ್ನು ತಂದು ಕೊಟ್ಟಳು. ತನ್ನ ತಮ್ಮ ತನಗೆ ಯಾವುದೇ ವಂಚನೆ ಇಲ್ಲದೆ ಕೆಲಸ ಮಾಡಿಕೊಡುತ್ತಾನೆ ಎನ್ನುವುದು ಅವಳ ನಂಬಿಕೆ. ತನ್ನ ಬಂಗಾರವನ್ನು ತಮ್ಮನಿಗೆ ಕೊಟ್ಟು ಕೆಲಸವನ್ನು ನೋಡುತ್ತಾ ಎದುರಿಗೇ ಕುಳಿತುಕೊಂಡಿದ್ದಳು. ಅಕ್ಕನ ಬಂಗಾರವನ್ನು ಬೆಂಕಿಗೆ ಹಾಕಿ ಕರಗಿಸಲಿಕ್ಕೆ ಮಗ ಅಕ್ಕಸಾಲಿ ಪ್ರಾರಂಭಿಸಿದ.
ಮೂಲೆಯಲ್ಲಿ ಕುಳಿತಿರುವ ತಂದೆಯ ಎಂದಿನ ಮಾತು ಪ್ರಾರಂಭವಾಯಿತು. " ರಾಮ ರಾಮಾ ನಿನ್ನ ಕೆಲಸವನ್ನು ಮಾಡು. ರಾಮಾ ನಿನಗೆ ಎಲ್ಲರೂ ಸಮಾನರೇ ಅಲ್ಲವೇ ? " ಎಂದು ಹೇಳಿದ. ಹೀಗೆ ಬಹಳ ಹೊತ್ತಾಯಿತು. ತನ್ನ ಮಾತನ್ನು ಮಗ ಗಮನಿಸಿದನೋ ಇಲ್ಲವೋ ಎಂದು ತಂದೆಯು ಪದೇ ಪದೇ ಅದೇ ಮಾತನ್ನು ಹೇಳತೊಡಗಿದ. ಆಗ ಮಗನಿಗೆ ಸಿಟ್ಟು ಬಂದು ಹೇಳಿಯೇಬಿಟ್ಟ.
" ಅಪ್ಪಾ, ಯಾಕೆ ಸುಮ್ಮನೆ ರಾಮ ರಾಮಾ ಎಂದು ಬಡಿದುಕೊಳ್ಳುತ್ತೀ. ರಾಮ ಲಂಕೆಯನ್ನು ಸುಲಿಗೆಮಾಡಿ ಬಹಳ ಸಮಯ ಆಯಿತು " ಎಂದು ಸಂಕೇತದ ಉತ್ತರವನ್ನು ಕೊಟ್ಟ.
.....................................................................................................
ನನ್ನ ಅನಿಸಿಕೆ : ' ಅಕ್ಕನ ಬಂಗಾರವಾದರೂ ಅಕ್ಕಸಾಲಿ ಅಕ್ಕಿಯಷ್ಟು ಬಂಗಾರವನ್ನು ಹೊಡೆಯುತ್ತಾನೆ ' ಎಂಬುದು ಹಳೆಯ ಗಾದೆ. ಇದರ ಅರ್ಥ ಯಾವುದೇ ವ್ಯವಹಾರಸ್ಥನೂ ಯಾರಿಂದಲಾದರೂ ತನ್ನ ಲಾಭವನ್ನು ಪಡೆಯದೇ ಇರುವುದಿಲ್ಲ ಎನ್ನುವ ವಾಸ್ತವಿಕ ಸತ್ಯ. ಯಾವುದೇ ಉದ್ಯೋಗದಲ್ಲಿಯೂ ಯಾರ ದಾಕ್ಷಿಣ್ಯಕ್ಕೆ ಒಳಗಾಗದೆ ಹಾಗಂತ ಅವರ ಮನಸ್ಸಿಗೆ ನೋವಾಗದಂತೆ ತನ್ನ ಪ್ರಯೋಜನವನ್ನು ಉಳಿಸಿಕೊಳ್ಳಬೇಕು, ಹೀಗೆ ತನ್ನ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು, ಅಂಥಹ ವೃತ್ತಿ ನೈಪುಣ್ಯತೆಯನ್ನು ಹೊಂದಿರಬೇಕು ಎನ್ನುವುದು ಈ ಕಥೆಯ ಸಂದೇಶ.
ತಾರೀಖು : 5 - 11 - 2015

No comments:

Post a Comment

Note: only a member of this blog may post a comment.