Saturday 21 April 2018

#### ಸಲಹೆ, ಭೋಧನೆಯ ಮಾತುಗಳು ಹೇಗೆ, ಎಲ್ಲಿ, ಯಾರಿಗೆ ? ####

~~~~ ಎಂ. ಗಣಪತಿ ಕಾನುಗೋಡು. ಯಾವುದೇ ಮಾತನ್ನಾದರೂ ಅದನ್ನು ಕೇಳುವವನ ಶಕ್ತಿ, ತಾಳ್ಮೆ ಮತ್ತು ಅವನ ಅಗತ್ಯವನ್ನು ಗ್ರಹಿಸಿ ಆಡಬೇಕಾಗುತ್ತದೆ. ಅದಿಲ್ಲದಿದ್ದರೆ ನಮ್ಮ ಆ ಮಾತು ವ್ಯರ್ಥ, ಕೆಲವೊಮ್ಮೆ ಅನರ್ಥಕ್ಕೂ ಎಡೆಮಾಡಿಕೊಡುತ್ತದೆ. ಅಪಹಾಸ್ಯಕ್ಕೆ ಗುರಿಯಾಗುತ್ತದೆ. ಸಮಯ , ಸಂದರ್ಭವನ್ನು ತಿಳಿಯದೆಯೇ ನಮ್ಮ ದೃಷ್ಟಿಯಲ್ಲಿ ಸರಿಯೆನಿಸಿದ ಮಾತುಗಳನ್ನು ಕೂಡಾ ಯೋಚಿಸಿ ಮಾತನಾಡಬೇಕಾಗುತ್ತದೆ. ಒಬ್ಬನಿಗೆ ತನ್ನದೇ ಕೆಲಸದ, ಸಮಸ್ಯೆಯ ಒತ್ತಡವಿದ್ದಾಗ ಇನ್ನೊಬ್ಬರ ಮಾತನ್ನು ಕೇಳುವಷ್ಟು ತಾಳ್ಮೆ ಇರುವುದಿಲ್ಲ. ಯಾವುದೋ ಒಂದು ನಿಲುವಿಗೆ ತಳಿಕೆ ಹಾಕೊಂಡವನಿಗೆ ಇನ್ನೊಬ್ಬರ ಮಾತನ್ನು ಅನುಸರಿಸುವ ಮನೋಭಾವ ಇರುವುದಿಲ್ಲ. ತಿಳಿವಳಿಕೆ ಕಡಿಮೆ ಇದ್ದವನಿಗೆ ಇನ್ನೊಬ್ಬರ ಮಾತನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ. ಯೌವನದ ಮದ, ಅಲ್ಪಜ್ಞಾನದ ಮದ [ ಮೂರ್ಖತನ ] ], ಹಣ, ಅಧಿಕಾರದ ಮದ, ಸ್ವಪ್ರತಿಷ್ಠೆಯ ಮದ ಹೀಗೆ ಯಾವುದೇ ಮದ ಇದ್ದವನಿಗೆ ಸಲಹೆ, ಬೋಧನೆ, ಹಿತವಚನ ಎಲ್ಲವೂ ನಂಜಾಗಿ ವ್ಯತಿರಿಕ್ತವಾಗುತ್ತದೆ. ಯಾವುದೇ ವಿಚಾರಕ್ಕೂ ಕರಾರುವಾಕ್ಕಾಗಿ ಮಾತನಾಡಬೇಕೆಂಬುದು ತಾರ್ಕಿಕ ವಿಚಾರ ಹೌದು. ಆದರೆ ವಾಸ್ತವಿಕ ಜೀವನದಲ್ಲಿ ಅದು ವಿರೋಧಭಾವವಾಗುತ್ತದೆ. ಯಾವುದೇ ಸನ್ನಿವೇಶದಲ್ಲಿ, ಯಾವುದೇ ವ್ಯಕ್ತಿಗೆ ಅಥವಾ ಯಾವುದೇ ಘಟನೆಗೆ ಸಂಬಂಧ ಪಟ್ಟಂತೆ ಮಾತನಾಡಬೇಕಾದರೆ ಬಹಳ ಸೂಕ್ಷ್ಮ ದೃಷ್ಟಿ ಬೇಕು,. ಹಿಂದುಮುಂದಿನ ವಿಷಯಗಳ ಅರಿವು ಇರಬೇಕು. ಇದ್ದುದನ್ನು ಇದ್ದ ಹಾಗೆ ಮಾತನಾಡುವುದು ಸಲ್ಲದು. ಅನೇಕ ಸಂದರ್ಭಗಳಲ್ಲಿ ಮಾತೂ ಮೂಕವಾಗಬೇಕಾಗುತ್ತದೆ ತಾರೀಖು 20 -- 4 -- 2018

No comments:

Post a Comment

Note: only a member of this blog may post a comment.