Sunday 18 March 2018

###### ಚಾಂದ್ರಮಾನ ಯುಗಾದಿ ######


~~~~~ ಎಂ. ಗಣಪತಿ ಕಾನುಗೋಡು.
ನಮ್ಮಲ್ಲಿ ಹಬ್ಬದ ಆಚರಣೆಗೂ ಒಂದು ಅರ್ಥ ಇದೆ. ಮನುಷ್ಯನಿಗೆ ಬದುಕಿನಲ್ಲಿ ನಿತ್ಯ ಜೀವನದ ಒತ್ತಡದಲ್ಲಿ ಸಂತೋಷವನ್ನು ಕಾಣಲಿಕ್ಕಾಗಿ ಒಂದೊಂದು ದಿನವನ್ನು ನಿರ್ಣಯಿಸಿ ಆ ದಿನದಂದು ಒಂದೊಂದು ಹಬ್ಬವನ್ನು ಆಚರಿಸಲಾಗುತ್ತದೆ. ಒಂದು ಹಬ್ಬದ ಆಚರಣೆಯ ಮಿಥಿಗೂ ಒಂದು ಅರ್ಥ ಇದೆ. ಸಾಂಪ್ರದಾಯಿಕ , ಪೌರಾಣಿಕ ಹಿನ್ನೆಲೆ ಇದೆ. ಆ ದಿನದಂದು ನಾವು ನಮ್ಮ ಎಷ್ಟೇ ತೊಂದರೆ ಇದ್ದರೂ ಸಮಯವನ್ನು ಹೊಂದಿಸಿಕೊಂಡು ಸಂಭ್ರಮವನ್ನು ಆಚರಿಸುತ್ತೇವೆ. ಕೆಲವು ಹಬ್ಬಗಳಿಗಂತೂ ಇಂಥಾದ್ದೇ ಭಕ್ಷ್ಯ ಆಗಬೇಕೆಂಬ ರೂಢಿ ಬಂದಿದ್ದು ಇದೇ ಕಾರಣಕ್ಕಾಗಿ. ತೀರಾ ಬಡತನದ ಒಂದು ಕಾಲದಲ್ಲಿ ಸಾಲ ಮಾಡಿಯಾದರೂ ನಮ್ಮ ಹಿಂದಿನವರು ವಿಶೇಷ ಭಕ್ಷ್ಯವನ್ನು ತಿನ್ನುತ್ತಿದ್ದರು. ಇಂದು ನಮಗೆ ಅಂಥಹ ಬಡತನ ಇಲ್ಲ. ಆದರೆ ನಮಗೆ ಯಾವುದಕ್ಕೂ ಪುರುಸೊತ್ತೇ ಇರುವುದಿಲ್ಲ. ಅಂಥಹ ಆಚರಣೆಯಲ್ಲಿ ಯುಗಾದಿಯೂ ಒಂದು.
ಚೈತ್ರ ಶುದ್ಧ ಪಾಡ್ಯಮಿಯಂದು ಚಾಂದ್ರಮಾನ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಸೌರಮಾನ ಯುಗಾದಿ ಎನ್ನುವ ಮತ್ತೊಂದು ಆಚರಣೆ ಬೇರೆ ಇದೆ. ಅದನ್ನು ಮೇಷ ಮಾಸದ ಸಂಕ್ರಮಣದ ದಿನ ಆಚರಿಸಲಾಗುತ್ತದೆ. ನಮ್ಮಲ್ಲಿ ರೂಢಿಯಲ್ಲಿ ಇರುವುದು ಚಾಂದ್ರಮಾನ ಯುಗಾದಿ.
ಹಿಂದೂ ಸಂಪ್ರದಾಯದಲ್ಲಿ ಯುಗಾದಿಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ರೋಮನ್ ಸಂಪ್ರದಾಯದ ಪ್ರಕಾರ ಜನವರಿಯ ಮೊದಲನೆಯ ದಿನವನ್ನು ಪಾಶ್ಚಿಮಾತ್ಯರು ಹೊಸ ವರ್ಷದ ದಿನವೆಂದು ಆಚರಿಸುತ್ತಾರೆ.
ಯುಗ ಎಂದರೆ ಇಲ್ಲಿ ವರ್ಷ ಎಂದು ಅರ್ಥೈಸಲಾಗಿದೆ. ಹೊಸ ವರ್ಷದ ಮೊದಲನೆಯ ದಿನವನ್ನು ಯುಗಾದಿ [ ಯುಗದ ಆದಿ ] ಎಂದು ಕರೆಯಲಾಗಿದೆ.
ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಚೈತ್ರ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ. ಉತ್ತರ ಭಾರತದವರು ವಿಕ್ರಮ ಶಕದ ಆರಂಭದ ದಿನ ಅಂದರೆ ಕಾರ್ತಿಕ ಶುದ್ಧ ಪಾಡ್ಯಮಿಯಂದು ಯುಗಾದಿಯನ್ನು ಆಚರಿಸುತ್ತಾರೆ. ಹಿಂದೆ ದಕ್ಷಿಣ ಭಾರತದಲ್ಲಿ ಆಳುತ್ತಿದ್ದ ದೊರೆ ಶಾಲಿವಾಹನನು ತನ್ನ ವಿಜಯದ ಸಂಕೇತವಾಗಿ ಶಕೆ ಪ್ರಾರಂಭಿಸಿದುದೂ ಚೈತ್ರ ಶುದ್ಧ ಪಾಡ್ಯಮಿಯಂದು.
ಋತುಗಳ ರಾಜ ವಸಂತನು ಈ ದಿನದಂದು ತನ್ನ ಶುಭ ಪಾದಾರ್ಪಣ ಮಾಡುತ್ತಾನೆ. ಗಿಡಮರಗಳಿಂದ ಎಲೆಗಳನ್ನು ಉದುರಿಸಿದ ಶಿಶಿರ ಋತು ಹೋಗಿ ಹೊಸ ಚಿಗುರು ಎಲೆ, ಹೂಗಳಿಗೆ, ಕಾಯಿಗಳಿಗೆ ಕಾರಣವಾಗುವ ವಸಂತ ಋತು ಇಂದಿನಿಂದ ಪ್ರಾರಂಭ ಆಗುತ್ತದೆ.
ಯುಗಾದಿಯ ದಿನ ಮನೆಮಂದಿಯೆಲ್ಲಾ ಬೆಳಗಿನ ಜಾವವೇ ಅಭ್ಯಂಜನ ಮಾಡಬೇಕೆಂಬುದು ಎಂದಿನ ಸಂಪ್ರದಾಯ. ಇಂದು ಹೊಸ ಬಟ್ಟೆಯನ್ನು ಧರಿಸಬೇಕು. ಇಷ್ಟದೇವತಾ ಪೂಜೆಯನ್ನು ಮಾಡಿ ಬೇವು -- ಬೆಲ್ಲ ತಿಂದು ಸಿಹಿ ಊಟವನ್ನು ಮಾಡಬೇಕು. ದೇವಸ್ಥಾನಗಳಲ್ಲಿ, ಗುರುಮನೆಗಳಲ್ಲಿ ಉತ್ಸವ ವಿಶೇಷಗಳು ನಡೆದು ಪಂಚಾಗ ಶ್ರಾವಣ ಕಾರ್ಯಕ್ರಮವೂ ನಡೆಯುತ್ತದೆ. ಇಂದಿನ ದಿನ ಚಂದ್ರ ದರ್ಶನವನ್ನು ಮುಖ್ಯವಾಗಿ ಮಾಡಬೇಕು.
ಬೇವು -- ಬೆಲ್ಲದ ಸೇವನೆಗೆ ಒಂದು ಅರ್ಥ ಇದೆ. ಸಿಹಿ ಕಹಿಗಳು , ಸುಖ ದುಃಖಗಳನ್ನೂ ಸಮನಾಗಿ ನೋಡಿ ಪ್ರತಿಯೊಬ್ಬನೂ ಸಮದರ್ಶಿಯೂ, ಸ್ಥಿತಪ್ರಜ್ನನೂ ಆಗಬೇಕೆಂಬುದು ಇದರ ಸಂದೇಶ.
ತಾರೀಖು : 17 -- 3 -- 2018
ಯುಗಾದಿಯ ಮುನ್ನಾದಿನ.

No comments:

Post a Comment

Note: only a member of this blog may post a comment.