Friday 11 May 2018

ಒಂದು ವಿಶಿಷ್ಟ ಕಾರ್ಯಕ್ರಮ



ಇಂದು ಸಾಗರದ ಗೆಣಸಿನಕುಣಿ ಶ್ರೀ ನಾಗಭೂಷಣ ಹೆಗಡೆಯವರ ಮಗನ ಮದುವೆಯ ವಧೂಪ್ರವೇಶದ ಸತ್ಕಾರ ಸಂಭ್ರಮ. ಅದರಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಸುಮಾರು ನಾಲ್ಕು ಅಡಿ ಉದ್ದದ ವಿಶಿಷ್ಟವಾದ ಕೊಳಲನ್ನು ನುಡಿಸಿ ಅದರ ಸೂಕ್ಷ್ಮತೆಯ ಸೂಚನೆಯಿಂದಾಗಿ ಮತ್ತೊಬ್ಬರು ಬಚ್ಚಿಟ್ಟುಕೊಂಡ ಯಾವುದೇ ವಸ್ತುವನ್ನು ಪತ್ತೆ ಹಚ್ಚುವ ಒಂದು ಜಾನಪದ ಕಲೆ. ಕಲಾವಂತಿಕೆಯ ಚಾತುರ್ಯ. ಒಬ್ಬನ ಕಣ್ಣನ್ನು ಕಟ್ಟಿ ಅವನಿಗೆ ಗೊತ್ತಾಗದಂತೆ ಒಂದು ವಸ್ತುವನ್ನು ಮತ್ತೊಬ್ಬ ವ್ಯಕ್ತಿಯ ಹತ್ತಿರ ಬಚ್ಚಿಟ್ಟಿರುತ್ತಾರೆ. ಕಣ್ಣು ಬಿಚ್ಚಿದ ನಂತರ ಕೊಳಲಿನ ನುಡಿಯ ಸೂಚನೆ ಮೇರೆಗೆ ಅವನು ಅದನ್ನು ಪತ್ತೆ ಹಚ್ಚಿ ತರುತ್ತಾನೆ. ಆ ವಸ್ತು ಬಚ್ಚಿಟ್ಟಿರುವ ಜಾಗವನ್ನು ಕೊಳಲನ್ನು ನುಡಿಸುವವನಿಗೆ ಗೊತ್ತಾಗುವಂತೆ -- ಹುಡುಕುವವನಿಗೆ ಗೊತ್ತಾಗದಂತೆ -- ವ್ಯವಸ್ಥೆ ಮಾಡಲಾಗುತ್ತದೆ. ಏಕೆಂದರೆ ಆ ವಸ್ತು ಎಲ್ಲಿ ಇದೆ ಎಂಬುದನ್ನು ತನ್ನ ಕೊಳಲಿನ ಶ್ರುತಿಯಿಂದಲೇ ಹುಡುಕುವವನಿಗೆ ನುಡಿಸುವವನು ಸೂಚಿಸುತ್ತಾನೆ. ಇಲ್ಲಿ ವಿಶೇಷ ಎಂದರೆ ಕೊಳಲನ್ನು ನುಡಿಸುವವನು ಹುಡುಕುವವನಿಗೆ ತಿಳಿಯುವಂತೆ ಕೊಳಲಿನ ಶ್ರುತಿಯ ಸೂಚನಾ ನುಡಿಯ ಕೌಶಲ್ಯವನ್ನು ಮೆರೆಯಬೇಕು. ಹುಡುಕುವವನು ನುಡಿಸುವವನ ಸೂಚನೆಯನ್ನು ಅರ್ಥಮಾಡಿಕೊಳ್ಳುವ ಕೌಶಲ್ಯವನ್ನು ಹೊಂದಿರಬೇಕು. ತಿಮ್ಮ ನಾಗೂಗೌಡ. ಜಡ್ಡಿಗದ್ದೆ , ವಾನಳ್ಳಿ , ಶಿರಸಿ ತಾಲೂಕು ಇವರು ವಯಸ್ಸಾದ ಮುದುಕರು. ತಮ್ಮ ವಿಶಿಷ್ಟ ಕೊಳಲನ್ನು ನುಡಿಸುತ್ತಾರೆ. ಗಣಪತಿ ಗೌಡ ಎನ್ನುವವರು ಕೊಳಲ ನುಡಿಯ ಸೂಚನೆಯಂತೆ ವಸ್ತುವನ್ನು ಹುಡುಕಿ ತೆಗೆಯುತ್ತಾರೆ.

ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನಾಗಭೂಷಣ ಹೆಗಡೆಯವರ ಸಂಬಂಧಿ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಶಿರಸಿ ದಂಪತಿಗಳು ಮಾಡಿರುತ್ತಾರೆ. ಅಪರೂಪದ ಜಾನಪದ ಕಲಾವಿದರನ್ನು ಸಾಗರದ ಜನತೆಗೆ ಪರಿಚಯಿಸಿದ ಶ್ರೀ ರಾಘವೇಂದ್ರ ಬೆಟ್ಟಕೊಪ್ಪ ಮತ್ತು ಗಾಯತ್ರಿ ರಾಘವೇಂದ್ರ ಅವರಿಗೆ ಧನ್ಯವಾದಗಳು

https://www.facebook.com/mganapathi.kangod/videos/979174142250156/


No comments:

Post a Comment

Note: only a member of this blog may post a comment.