Thursday 31 May 2018

#### ಸಂಸಾರ ####



ಸಂಸಾರವೆಂದರೆ ಗಂಡ ಹೆಂಡತಿ, ತಾಯಿ ತಂದೆ, ಅಣ್ಣ ತಮ್ಮ, ಮಕ್ಕಳು ಮರಿ, ನೆಂಟರು ಇಷ್ಟರು.ಜೊತೆಗೆ ಖಾಯಂ ಕೆಲಸದವರು ಕೂಡಾ . ಇದು ನಮ್ಮ ಪಾರಂಪರಿಕ ಅವಿಭಕ್ತ ಕುಟುಂಬ. ಅದು ಈಗ ಕೇವಲ ಗಂಡ ಹೆಂಡತಿ , ಒಂದು ಮಗು ಹೀಗೆ ಮೂವರು ಸದಸ್ಯರನ್ನೊಳಗೊಂಡ ಅಣುಕುಟುಂಬವಾಗುತ್ತಲಿದೆ [ Nuclear Family ].

ಸಂಸಾರವೇ ಸಮಾಜಕ್ಕೆ ತಳಹದಿ. ಈಗಿನ ಕಾಲದ ಆರ್ಥಿಕ ಸ್ಥಿತಿಗಳಿಂದಲೂ, ವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿಶಯವಾದ ಪ್ರಾಶಸ್ತ ಕೊಡಲು ಪ್ರಾರಂಭಿಸಿರುವುದರಿಂದಲೂ ಸಂಸಾರದಲ್ಲಿ ವಿಶ್ವಾಸ , ವಿಧೇಯತೆ, ಒಗ್ಗಟ್ಟು,ಮುಂತಾದ ಸ್ನೇಹಗುಣಗಳು ಕಡಿಮೆ ಆಗಿವೆ. ಸ್ನೇಹ, ವಿಶ್ವಾಸ ಇಲ್ಲದ ಸಂಸಾರ ಒಂದೋ ಮರಳುಕಾಡು ಅದಿಲ್ಲದಿದ್ದರೆ ಕುರುಕ್ಷೇತ್ರ. ಅಣ್ಣ ತಮ್ಮಂದಿರ , ಅಪ್ಪ ಮಕ್ಕಳ ನಡುವೆಯ ಮಾತಿರಲಿ ಗಂಡ ಹೆಂಡತಿಯ ನಡುವೆಯೇ ಹೊಡೆದಾಟ. ಪರಿಣಾಮ ಸಂಸಾರ ಶಿಥಿಲ . ಮಕ್ಕಳು ಮೂರಾಬಟ್ಟೆ. ಅಜ್ಜ ಅಜ್ಜಿಯರಿದ್ದರೆ ನಾಯಿಪಾಡು.

ಜೊತೆಯಲ್ಲಿ ಇರಬೇಕಾದವರು ಅಹಿತವಾದರೆ ಅದು ಕಾಲಿನಲ್ಲಿ ಮುಳ್ಳು ಚುಚ್ಚಿ ಮುರಿದುಕೊಂಡಂತೆ. ತೆಗೆದರೆ ಘಾಯ., ತೆಗೆಯದಿದ್ದರೆ ನೋವು. ಸಂಸಾರದ ನಡೆ ಕುಂಟು. ಏಕೆ ?. ಇಲ್ಲಿ ನಡೆಯುವವರು , ನಡೆಸುವವರು ಹೊಂದಾಣಿಕೆಯ ಕೊರತೆಯ ಗೊಂದಲದಲ್ಲಿ ಹೆಳವರಾಗಿದ್ದಾರೆ, ಮೂಕರಾಗಿದ್ದಾರೆ, ಕಿವುಡರಾಗಿದ್ದಾರೆ. ಮುರಿದ ಮುಳ್ಳಿನ ಪರಿಣಾಮ ಸಂಸಾರದ ಯಾವ ಕೆಲಸದಲ್ಲಿಯೂ ಎಲ್ಲರಿಗೂ ನೋವಿನ ಮೇಲೆ ಜ್ಞಾನ, ಹಿಂದೇಟು.

ಈ ನೋವು ಇಲ್ಲದಿರಬೇಕಾದರೆ ಸಂಸಾರದಲ್ಲಿ ಪ್ರತಿಯೊಬ್ಬನಲ್ಲಿಯೂ ಅತಿ ಸ್ವಾತಂತ್ರ್ಯದ [ ಸ್ವೇಚ್ಚೆ ] ಮನೋಭಾವ ತಗ್ಗಬೇಕು. ಜೊತೆಗಿರುವವರ ಹಿತಕ್ಕಾಗಿ ತಮ್ಮ ಸುಖದ ಕಾಳಜಿಯನ್ನು ಸ್ವಲ್ಪ ಮಟ್ಟಿಗೆ ಪ್ರತಿಯೊಬ್ಬರೂ ಕಡಿಮೆ ಮಾಡದ ಹೊರತು ಒಟ್ಟಾರೆ ಯಾರಿಗೂ ಸುಖ ಸಿಕ್ಕದು.

ಸಂಸಾರದಲ್ಲಿ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ ಇದ್ದರೆ ಕ್ಷಮೆ, ತ್ಯಾಗ ಇವೆರಡೂ ತನ್ನಿಂದ ತಾನೇ ಬಂದು ಅಲ್ಲಿ ಸೇರಿಕೊಳ್ಳುತ್ತದೆ. ಈ ಗುಣಗಳೆಲ್ಲಾ ನಮ್ಮಲ್ಲಿ ತನ್ನಿಂದ ತಾನೇ ಹುಟ್ಟುವ ಕೇಂದ್ರವೆಂದರೆ ಮನೆ. ಅದು ಸಂಸಾರ.

[ ಆಧಾರ : ವಚನ ಭಾರತದ ಪೀಠಿಕೆಯಲ್ಲಿ ಮಾನ್ಯ ಎ. ಆರ್. ಕೃಷ್ಣಶಾಸ್ತ್ರಿಯವರ ಮಾತು ---- ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ' ಸಪ್ತಪದಿ ಸಂದೇಶ ' ಪುಸ್ತಕದ ಮುನ್ನುಡಿಯಲ್ಲಿ ಪ್ರಸ್ತಾಪಿಸಿದ್ದು ]


M Ganapathi Kangod

No comments:

Post a Comment

Note: only a member of this blog may post a comment.