Monday, 27 August 2018

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

" ಒಂದು ಸುಖವನ್ನು ಬಯಸಿದರೆ ಹಲವು ಸಮಸ್ಯೆಗಳನ್ನು ಆಹ್ವಾನಿಸಿದಂತೆ ".

ಉದಾಹರಣೆ:
ಮದುವೆಯಾಗಿ ಸುಖವಾಗಿ ಇರಬೇಕು ಎನ್ನುವ ಹಂಬಲವನ್ನು ಬೆನ್ನಟ್ಟುವ ಸಮಸ್ಯೆಗಳು :
[ ಈ ಮುಂದೆ ಹೇಳಲ್ಪಡುವ ವಿಷಯಗಳನ್ನು ಯಾರೂ ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದು. ಇವು ಸರ್ವೆಸಾಮಾನ್ಯ ವಿಚಾರಗಳಾದುದರಿಂದ ಕೆಲವು ವಿಚಾರಗಳು ಕೆಲವರಿಗೆ ಅನ್ವಯಿಸಬಹುದಾದರೂ ಅದನ್ನು ತಮಗೆಂದು ದಯೆಯಿಟ್ಟು ತೆಗೆದುಕೊಳ್ಳಬಾರದು. ]
1 . ಸರಿಯಾದ ನೆಂಟಸ್ಥನದ ಮತ್ತು ಚೆನ್ನಾಗಿರುವ ಕನ್ಯೆಯ ಜಾತಕ ಬರುವುದಿಲ್ಲ.
2 . ಬಂದದ್ದು ಜಾತಕವೇ ತಾಳೆಯಾಗುವುದಿಲ್ಲ. ಒಂದಕ್ಕೆ ಮಕ್ಕಳಾಗುವುದಿಲ್ಲ, ಇನ್ನೊಂದಕ್ಕೆ ಗಂಡನ ಜೊತೆ ಜಗಳವಾಡುವವಳು, ಇನ್ನೊಂದು ಶಷ್ಟಾಷ್ಟಕ, ದಾಂಪತ್ಯ ದೀರ್ಘವಾಗಿ ಮುಂದುವರೆಯುವುದಿಲ್ಲ, ಇನ್ನೊಂದಕ್ಕೆ ಕುಜದೋಷ ಜಾಸ್ತಿ ಇದೆ, ಗಂಡ ಸಾಯುವ ಯೋಗ, ಇನ್ನೊಂದು ಚ್ಯಾರಿತ್ರ್ಯ ಸರಿಯಿಲ್ಲ, ಇನ್ನೊಂದು ಆಶ್ಲೇಷ ನಕ್ಷತ್ರ, ಅತ್ತೆಗೆ ಕೇಡು. ಹೀಗೆ ಒಂದಲ್ಲ ಒಂದು ಕಾರಣದಿಂದ ಜೋಯಿಸರು ಬಂದ, ಮೆಚ್ಚಿಕೊಂಡ ಜಾತಕಗಳನ್ನು ಬದಿಗಿಡುತ್ತಾರೆ.
3 . ಅಂತೂ ಜಾತಕ ತಾಳೆಯಾಗಿ, ಸಂಬಂಧ ಒಪ್ಪಿ ಹುಡುಗ - ಹುಡುಗಿ ನೋಡಿಯಾಯಿತು. ಈಗಿನ ಕಾಲದ ರೂಢಿಯಂತೆ ಅವರಿಬ್ಬರ ಇಂಟರ್ವ್ಯೂದಲ್ಲಿ ಯಾವುದೋ ವಿಚಾರಕ್ಕೆ ಹುಡುಗ / ಹುಡುಗಿ ಸೇರಲಿಲ್ಲ,ಮದುವೆ ಮುರಿದು ಹೋಯಿತು.
4 . ಮದುವೆ ನಿಕ್ಕಿಯಾಯಿತು. ಮುಹೂರ್ತದ ದಿನ ಅನಿರೀಕ್ಷಿತ ಅಶೌಚ ಬಂದು ಮದುವೆ ಮುಂದೆ ಹೋಯಿತು.
5 .ಮದುವೆಯಾಯಿತು. ಗಂಡ-ಹೆಂಡತಿ ಕೈ ಕೈ ಹುರಿ ಹೊಸೆದುಕೊಂಡು ಜಾತ್ರೆ, ಹನಿಮೂನ್ ಎಂತೆಲ್ಲಾ ತಿರುಗಿದ್ದೂ ಆಯಿತು. ಸರಿ. ಮೂರೂ ತಿಂಗಳಲ್ಲೇ ದಾಂಪತ್ಯದಲ್ಲಿ ಬಿರುಕು ಬಂತು. ಡೈವೋರ್ಸೂ ಆಗಿಹೋಯಿತು.
6 . ಇಲ್ಲ. ಕೆಲವು ದಾಂಪತ್ಯಕ್ಕೆ ಸಂಬಂಧಿಕರು ಯಾರೋ ಸಕಾಲದಲ್ಲಿ ಸರಿಯಾಗಿ ಬೆಸುಗೆ ಹಾಕಿದರು. ಗಂಡ-ಹೆಂಡತಿ ಹೇಗೋ ಸರಿಯಾಗಿ ಹೊಂದಿಕೊಂಡರು. ಮಕ್ಕಳೆ ಆಗಲಿಲ್ಲ.
7 . ಹರಕೆಯಿಂದಲೋ,ಚಿಕಿತ್ಸೆಯಿಂದಲೋ ಹೆಂಡತಿ ಬಸುರಿಯಾದಳು. ಮಧ್ಯದಲ್ಲಿಯೆ ಗರ್ಭಪಾತವಾಗಿ ಹೋಯಿತು.
8 .ಮತ್ತೇನೋ ಪ್ರಯತ್ನದಿಂದ ಗರ್ಭಿಣಿಯಾಗಿದ್ದಾಗ ಬಹಳ ನಿಗಾ ಇಟ್ಟು ಮಗುವಾಯಿತು. ಅದು ಬುದ್ಧಿಮಾಂದ್ಯ. ಸ್ಕಾನಿಂಗ್ ನಲ್ಲಿ ಹೇಳಲೆ ಇಲ್ಲ.
9 .ಸರಿಯಾದ ಮಗು ಆಯಿತು. ತಾಯಿಗೆ ಸೂತಕಸನ್ನಿ.
10 . ಎಲ್ಲ ಸರಿಯಾಯಿತು. ಮಗುವನ್ನು ಚೆನ್ನಾಗಿ ಬೆಳೆಸಲಾಯಿತು .
11 . ಇಷ್ಟು ಹೊತ್ತಿಗೆ ಅತ್ತೆ ಸೊಸೆಗೆ ಸರಿ ಬರಲಿಲ್ಲ. ಅಪ್ಪ -ಅಮ್ಮಂದಿರನ್ನು ಬಿಟ್ಟು ಬೇರೆ ಇರುವುದು ಅನಿವಾರ್ಯವಾಯಿತು. ಮದುವೆಯಾಗಿದ್ದರಿಂದ ಅಪ್ಪ ಮತ್ತು ಮಗನಿಗೆ ಸಮಸ್ಯೆ ಒಂದೇ ತರಹದ್ದು ಆಯಿತು.
12 .ಮಗನ ಸಂಸಾರದಲ್ಲಿ ಅವನ ಮಗ \ ಮಗಳು ಸರಿಯಾದ ವಿದ್ಯಾಭ್ಯಾಸವಿಲ್ಲದೆ ಪೋಕರಿಯಾದ \ ಳು.
13 .ಮಗ \ ಮಗಳು ಪೋಕರಿಯಾಗದೆ ಬೆಳೆದು ಸರಿಯಾದ ವಿದ್ಯಾಭ್ಯಾಸ ಮಾಡಿಕೊಂಡು ಮದುವೆ ವಯಸ್ಸಿಗೆ ಬಂದರು. ಅಷ್ಟೊತ್ತಿಗೆ ಮಗನಾದರೆ ಯಾವುದೋ ಒಂದು ವಿಜಾತಿಯ ಹುಡುಗಿಯನ್ನು ಗಂಟು ಹಾಕಿಕೊಂಡ. ಮಗಳಾದರೆ ವಿಜಾತಿಯ ಒಬ್ಬ ಬಸ್ ಕಂಡಕ್ಟರನನ್ನು ಕೂಡಿಕೊಂಡು ಓಡಿ ಹೋದಳು.
14 . ಮಗ ಸರಿಯಾದ ದಾರಿಯಲ್ಲೇ ಹೋಗಿ ದುಡಿಯುವ ಹಂತಕ್ಕೆ ಬಂದ. ಸಂಸಾರದ ನೆರವಿಗೆ ಬರುವ ಯೋಗ್ಯತೆ ಗಳಿಸಿಕೊಂಡ. ಹೆಂಡತಿ ಮಗನನ್ನು ಒಳಹಾಕಿಕೊಂಡು ಗಂಡನ ಜೊತೆ ಜಗಳವಾಡಲು ಪ್ರಾರಂಭಿಸಿದಳು. ಅಂತೂ ಗಂಡನಿಂದ ಸಂಸಾರದ ಯಜಮಾನಿಕೆಯನ್ನು ಬಿಡಿಸಿ ಮಗನಿಗೆ ಕೊಡಿಸಿ ತನ್ನ ಗಂಡನನ್ನು ಮೂಲೆಗೆ ಕೂರಿಸಿದಳು.
15 .ತಾಯಿ ತನ್ನ ಅಧ್ವರ್ಯದಲ್ಲಿಯೇ ಮಗನಿಗೆ ಮದುವೆ ಮಾಡಿದಳು. ಆರು ತಿಂಗಳಲ್ಲಿಯೇ ಅತ್ತೆ -ಸೊಸೆಗೆ ಸರಿಬಾರದೆ ಸೊಸೆಯು ಅತ್ತೆಯನ್ನು ಬದಿಗೆ ಸರಿಸಿದಳು.
16 .ಇಲ್ಲಿ ಮಗನ ಸಂಸಾರವೇ ಬೇರೆಯಾಯಿತು. ಮಗನ ಅಮ್ಮನಿಗೆ ಮಗನೂ ಇಲ್ಲ.ಅವಳಿಗೆ ಗಂಡ ಹೇಗೂ ಮುಂಚೆಯೇ ಕೈ ತಪ್ಪಿ ಹೋಗಿದ್ದಾನೆ.
17 .ಮಗನ ಅಪ್ಪನಿಗೆ ತನ್ನ ಹೆಂಡತಿಯೇ ಕೈ ತಪ್ಪಿ ಹೋದಮೇಲೆ ಮಗ-ಸೊಸೆಯ ಪರಿಚಯ ಇರುವುದಾದರೂ ಹೇಗೆ?
18 .ಹೆಂಡತಿ ತವರ ಮನೆಯಲ್ಲಿ ಪಾತ್ರೆ ತೊಳೆಯಲಿಕ್ಕೆ ಒಂದು ಜನವಾಗಿದೆ. ಗಂಡ ಶ್ರೀಮಂತ ನೆಂಟರೊಬ್ಬರ ಮನೆಯಲ್ಲಿ ಮನೆ ಕಾಯಲಿಕ್ಕೆ ಒಂದು ಜನವಾಗಿದೆ.

ನೋಡಿದಿರಾ.... !. ಒಂದು ಮದುವೆಯಾಗುವ ಸುಖವನ್ನು ಬಯಸಿದ್ದರ ಹಿಂದೆ ಇರಬಹುದಾದ ಹಲವಾರು ----- ಸದ್ಯ ಹದಿನೆಂಟು ---- ಸಮಸ್ಯೆಗಳು. ಇನ್ನೂ ಉಪ ಸಮಸ್ಯೆಗಳು ಬಹಳ ಇವೆ.
ಬದುಕೇ ಹಾಗೆ. ಒಂದು ಸುಖವನ್ನು ಬಯಸಲು ಹೊರಟರೆ ಹಲವಾರು ಸಮಸ್ಯೆಗಳನ್ನು ಅನುಭವಿಸಲು ನಾವು ಸಿದ್ಧರಿರಬೇಕು. 
------------------
ಎಂ. ಗಣಪತಿ. ಕಾನುಗೋಡು.
 P. O. B. ಮಂಚಾಲೆ
 ಸಾಗರ --- ಶಿವಮೊಗ್ಗ
Pin: 577431
. ಮೊ. 9481968771
Date : 26 August 2014

No comments:

Post a comment