Thursday 10 January 2019

#### ಯಜ್ನೋಪವೀತ ####

ಯಜ್ನೋಪವೀತ ಎಂದರೆ ಕೇವಲ ಜನಿವಾರ ಅಲ್ಲ. ಯಜ್ನೋಪವೀತದ ಜಾಗಕ್ಕೆ ಕಾಲಾನುಕ್ರಮದಲ್ಲಿ ಜನಿವಾರ ಬಂದಿದೆ ಅಷ್ಟೆ. ಯಜ್ನೋಪವೀತ ಎಂದರೆ ಯಜ್ಞ ಮಾಡುವುದಕ್ಕಾಗಿ ಮಾಡಿಕೊಂಡ ಉಪವೀತ. ಉಪವೀತ ಎಂದರೆ ಉತ್ತರೀಯ ಎಂದರ್ಥ. ಎಡದ ಹೆಗಲ ಮೇಲಿನಿಂದ ಬಂದು ಬಲದ ತೋಳಿನ ಕೆಳಗಡೆಯಿಂದ ಬಂದಿದ್ದರೆ ಅದು ಯಜ್ನೋಪವೀತವಾಗುತ್ತದೆ. ಯಜ್ನೋಪವೀತವನ್ನು ಬಹಳ ಹಿಂದಿನ ಕಾಲದಲ್ಲಿ ಸದಾ ಧರಿಸಿರಬೇಕಾಗಿರಲಿಲ್ಲ. ಯಜ್ನಾದಿ ಧಾರ್ಮಿಕ ಕಾರ್ಯವನ್ನು ಮಾಡುವಂಥಹ ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಧರಿಸಿದ್ದರೆ ಸಾಕಾಗಿತ್ತು. ಸ್ವಾಧ್ಯಾಯ , ಉತ್ಸರ್ಗ, ದಾನ, ಭೋಜನ, ಮತ್ತು ಆಚಮನಗಳೆಂಬ ಪಂಚಕರ್ಮಗಳನ್ನು ನಡೆಸುವಾಗ ಮಾತ್ರ ಧರಿಸುವ ಅಗತ್ಯವಿತ್ತು. ಪ್ರಾಚೀನ ಕಾಲದಲ್ಲಿ ಈಗಿನಂತೆ ಯಜೋಪವೀತವು ಜನಿವಾರ ಆಗಿರಲಿಲ್ಲ. ಕೃಷ್ಣಮೃಗದ ಇಡೀ ಚರ್ಮವೇ [ ಕೃಷ್ಣಾಜಿನ ] ಉಪವೀತವನ್ನಾಗಿ ಧರಿಸಲಾಗುತ್ತಿತ್ತು. ಅದು ಭಾರವೆನ್ನಿಸಿದ್ದರಿಂದ ನಂತರ ಕಾಲಾನುಕ್ರಮದಲ್ಲಿ ಹತ್ತಿಯ ಬಟ್ಟೆಯನ್ನು ಉಪವೀತವನ್ನಾಗಿ ಬಳಸಲಾಯಿತು. ಆದರೆ ಪ್ರಾಚೀನ ಪದ್ಧತಿಯನ್ನು ಬಿಡಲಾಗದ ಪೂರ್ವಾಗ್ರದಲ್ಲಿ ಆ ಬಟ್ಟೆಯ ಉಪವೀತದ ಜೊತೆಗೆ ನಾಲ್ಕು ಅಂಗುಲ ಅಗಲದ ಕೃಷ್ಣಾಜಿನದ ಉದ್ದನೆಯ ಪಟ್ಟಿಯನ್ನು-- ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗಿನವರೆಗೆ -- ಧರಿಸಿಕೊಳ್ಳುವ ಪದ್ಧತಿ ಬಂತು. ಮುಂದೆ ಕಾಲಾನುಕ್ರಮದಲ್ಲಿ ಅದೂ ಕಷ್ಟವೆನಿಸಿದಾಗ ಮೂರು ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲದ ಒಂದು ಚಿಕ್ಕ ತುಂಡನ್ನು ಆ ಬಟ್ಟೆಯ ಉಪವೀತಕ್ಕೆ ಸೇರಿಸಿ ಧರಿಸುವ ಪದ್ಧತಿ ಬಂತು. ಈಗ ಉಪನಯನವಾದ ಕೆಲವು ದಿನ ಅದೇ ರೀತಿ ಜನಿವಾರಕ್ಕೆ ಕೃಷ್ಣಾಜಿನ ಚಿಕ್ಕ ತುಂಡನ್ನು ಸೇರಿಸುವುದು ಈ ಕಾರಣದಿಂದ ಎಂದು ಹೇಳಲಾಗಿದೆ. ಕೃಷ್ಣಮೃಗದ ಚರ್ಮವೇ ಆಗಲಿ, ನಂತರದ ಹತ್ತಿಯ ಬಟ್ಟೆಯೇ ಆಗಲಿ ಎಡದ ಹೆಗಲ ಮೇಲಿನಿಂದ ಬಲ ತೋಳಿನ ಕೆಳಗೆ ಬರುವ ಕ್ರಮವನ್ನು ಅನುಸರಿಸಲಾಗಿತ್ತು. ಈಗ ಅಪರಕರ್ಮವನ್ನು ಮಾಡುವಾಗ ಜನಿವಾರದ ಜೊತೆಗೆ ಬಟ್ಟೆಯ ತುಂಡನ್ನುಉಪವೀತದ ಆಕಾರದಲ್ಲಿ ಸೇರಿಸಿಕೊಳ್ಳುವುದು ಆಗಿನ ಕಾಲದ ಇಡೀ ಬಟ್ಟೆಯ ಉಪವೀತದ ಅನುಕರಣೆ ಇರಬೇಕು. ಒಂದು ಕಾಲದಲ್ಲಿ ಯಜ್ಞಗಳು ವ್ಯಕ್ತಿಯ ಜೀವನದಲ್ಲಿ ಆಗಾಗ್ಯೆಯಷ್ಟೇ ನಡೆಯುತ್ತಿತ್ತು ಆಗಷ್ಟೇ ಯಜೋಪವೀತವನ್ನು ಧರಿಸಲಾಗುತ್ತಿತ್ತು. ಉಳಿದ ಸಂದರ್ಭಗಳಲ್ಲಿ ಅದನ್ನು ಧರಿಸುವ ಪರಿಪಾಠ ಇರಲಿಲ್ಲ. ಆದರೆ ಕಾಲಾನುಕ್ರಮದಲ್ಲಿ ಯಜ್ನಗಳಿಗೆ ಪ್ರಾಶಸ್ತ ಬಂದಮೇಲೆ ಪ್ರತಿ ದಿನವೂ ಯಜ್ನವನ್ನು ಮಾಡಬೇಕೆಂದು ವಿಧಿ ಮಾಡಿದರು. ಪಂಚಮಹಾಯಜ್ಞಗಳು ಗೃಹಸ್ಥನಿಗೆ ಕಡ್ದಾಯವೆಂದು ವಿಧಿಸಲಾಯಿತು. ಅಷ್ಟೇ ಅಲ್ಲ, ಇತರ ಅನೇಕ ಕಾರ್ಯಗಳನ್ನು ಯಜ್ಞ ಸಮಾನವೆಂದು ಸಾರಲಾಯಿತು. ಯಜ್ನ ಮಾಡುವಾಗ ಉಪವೀತ ಇರಬೇಕು ಎಂದಮೇಲೆ ಈ ಕಾಲಘಟ್ಟದಲ್ಲಿ ಸದಾಕಾಲವೂ ಯಜ್ನೋಪವೀತವು ಶರೀರದ ಮೇಲೆ ಇರುವುದು ಕಡ್ದಾಯವಾಯಿತು. ಈ ಕಾಲದಲ್ಲಿ ಕೃಷ್ಣಾಮೃಗದ ಇಡಿಯ ಚರ್ಮವನ್ನೋ ಅಥವಾ ಕೃಷ್ಣಾಜಿನದ ನಾಲ್ಕು ಅಂಗುಲ ಅಗಲದ ಉದ್ದನೆಯ ಪಟ್ಟಿಯನ್ನು ಸೇರಿಸಿಕೊಂಡ ಹತ್ತಿಯ ಇಡಿಯ ಬಟ್ಟೆಯನ್ನೋ ಅಥವಾ ನಾಲ್ಕು ಅಂಗುಲದ ಕೃಷ್ಣಾಜಿನದ ತುಂಡನ್ನು ಸೇರಿಸಿದ ಹತ್ತಿಯ ಬಟ್ಟೆಯನ್ನೂ ಉಪವೀತವನ್ನಾಗಿ ದಿನ ನಿತ್ಯ ಧರಿಸುವ ಪದ್ಧತಿ ಕಷ್ಟವೆನಿಸಿರಬೇಕು. ಆಗ ಅದರ ಬದಲು ದರ್ಭೆಯ ಹಗ್ಗವನ್ನು ಯಜ್ನೋಪವೀತವನ್ನಾಗಿ ಧರಿಸುವ ಪರಿಪಾಠ ಬಂತು. ಆದರೆ ಅದೂ ಕಿರಿಕಿರಿಯನ್ನುಂಟು ಮಾಡುತ್ತಿದ್ದುದರಿಂದ ಹತ್ತಿಯ ದಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಜಾರಿಗೆ ಬಂತು. ಮೂರೆಳೆಯ ದಾರವನ್ನು ಜನಿವಾರವನ್ನು ಯಜ್ನೋಪವೀತವನ್ನಾಗಿ ಧರಿಸುವ ಪದ್ಧತಿ ಪ್ರಾಚಿನದಕ್ಕೆ ಹೋಲಿಸಿದರೆ ಇತ್ತೀಚಿನದು. ಯಜ್ನೋಪವೀತವು ಹೀಗೆ ಸಂಪೂರ್ಣ ಕಷ್ಣಾ ಮೃಗದ ಚರ್ಮ , ಸಂಪೂರ್ಣ ಹತ್ತಿಯ ಬಟ್ಟೆ , ಹತ್ತಿಯ ದಾರ ಎಂಬ ಮೂರು ಹಂತಗಳಲ್ಲಿ ಕಾಲಾನುಕ್ರಮದಲ್ಲಿ ಪರಿವರ್ತನೆಯಾಗಿದೆ. 

 [ ಪ್ರೊ. ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಎನ್ನುವ ಪುಸ್ತಕದಿಂದ ಆಯ್ದು ಬರೆದದ್ದು. ] 
 ತಾರೀಖು : 10 -- 1 -- 2019

No comments:

Post a Comment

Note: only a member of this blog may post a comment.