Sunday 13 January 2019

#### ಜನಿವಾರ ###

ಸಂಗ್ರಹ : ಎಂ. ಗಣಪತಿ ಕಾನುಗೋಡು.

 ಜನಿವಾರ ಎನ್ನುವುದು ಮೂರು ಎಳೆಯ ಹತ್ತಿಯ ದಾರ . ಪ್ರಾಚೀನ ಕಾಲದಲ್ಲಿ ಮೊದಲು ಕೃಷ್ಣಮೃಗದ ಇಡಿಯ ಚರ್ಮ , ಸ್ವಲ್ಪ ಕಾಲದ ನಂತರ ನಾಲ್ಕು ಅಂಗುಲದ ಅಗಲದ ಉದ್ದನೆಯ ಕೃಷ್ಣಮೃಗದ ಚರ್ಮದ ಪಟ್ಟೆಯೊಂದಿಗೆ ಹತ್ತಿಯ ದೊಡ್ಡ ಬಟ್ಟೆ, ಇನ್ನೂ ಸ್ವಲ್ಪ ಕಾಲದ ನಂತರ ಕೃಷ್ಣಾ ಮೃಗದ ಚರ್ಮದ ನಾಲ್ಕು ಅಂಗುಲದ ಒಂದು ಸಣ್ಣ ತುಂಡಿನೊಂದಿಗೆ ಹತ್ತಿಯ ಬಟ್ಟೆ, ಅದಕ್ಕೂ ಸ್ವಲ್ಪ ಕಾಲಾ ನಂತರ ದರ್ಭೆಯ ಹುರಿಯನ್ನು ಯಜ್ನೋಪವೀತವನ್ನಾಗಿ ಮಾಡಿಕೊಳ್ಳಲಾಗಿತ್ತು. ಬಹಳ ಕಾಲದ ನಂತರ ಇವೆಲ್ಲದರ ಬದಲಿಗೆ ಅನುಕೂಲಸಿಂಧುವಾಗಿ ಹತ್ತಿಯ ನೂಲಿನ ದಾರವನ್ನು ಯಜ್ನೋಪವೀತವನ್ನಾಗಿ ಬಳಸುವ ರೂಢಿ ಬಂತು. ಅದಕ್ಕೆ ಜನಿವಾರ ಎಂದು ಹೆಸರಿಸಲಾಯಿತು. ಹಿಂದಿನ ಯಜ್ನೋಪವೀತದ ಕ್ರಮದಂತೆ ಜನಿವಾರವನ್ನೂ ಎಡ ಹೆಗಲಿನ ಮೇಲಿನ ಭಾಗದಿಂದ ಬಂದು ಬಲದ ತೋಳಿನ ಕೆಳಗಡೆಯವರೆಗೆ ಧರಿಸಿಕೊಳ್ಳುವುದು ಆಚರಣೆಯಾಯಿತು.

 ಜನಿವಾರಕ್ಕೆ ಹಿಂದಿನ ಯಜ್ನೋಪವೀತದ ಬೇರೆ ಬೇರೆ ರೂಪಗಳಿಗೆ ಕೊಟ್ಟ ಮಹತ್ವ ಮತ್ತು ಪಾವಿತ್ರ್ಯವನ್ನು ಕೊಡಲಾಯಿತು. ಅದಕ್ಕಾಗಿ ಜನಿವಾರವನ್ನು ಧರಿಸುವಾಗ ಹಿಂದಿನ ಯಜ್ನೋಪವೀತಗಳನ್ನು ಧರಿಸುವಾಗ ಹೇಳುವ ಮಂತ್ರ " ಯಜ್ನೋಪವೀತಂ ಪರಮಂ ಪವಿತ್ರಂ ............ ಯಜ್ನೋಪವೀತಂ ಬಲಮಸ್ತು ತೇಜಃ || ಎನ್ನುವ ಮಂತ್ರವನ್ನು ಹೇಳಲಾಗುತ್ತದೆ. ಶಾಸ್ತ್ರಕಾರರು ಅದಕ್ಕೆ ಪಾವಿತ್ರ್ಯ ಮತ್ತು ಗಾಂಭೀರ್ಯಗಳನ್ನು ತುಂಬುವುದಕ್ಕೆ ಅನೇಕ ವಿಧಿಗಳನ್ನು ಹೇಳಿದ್ದಾರೆ.

 ಜನಿವಾರದ ಅಳತೆ 96 ಅಂಗುಲ. ಅದು ಅತಿ ಲಂಬವೂ ಆಗಿರಬಾರದು. ಅತಿ ಹ್ರಸ್ವವೂ ಆಗಿರಬಾರದು. 96 ಅಂಗುಲದ ದಾರವನ್ನು ಮೂರು ಸಮ ಎಳೆಗಳಾಗಿ ವಿಂಗಡಿಸಿ ಒಂದೇ ಗಂಟನ್ನು ಹಾಕುವುದು ಕ್ರಮ. ಮೂರು ಎಳೆಗಳು ಮೂರು ವೇದಗಳನ್ನು ಸಂಕೇತಿಸುತ್ತವೆ. ಇಲ್ಲಿ ಹಾಕುವ ಗಂಟಿಗೆ ಬ್ರಹ್ಮಗಂಟೆಂದು ಹೆಸರು. ಜನಿವಾರವು ಮೂರು ಎಳೆಗಳಿಂದ ಕೂಡಿರುತ್ತದೆ. ಅದರಲ್ಲಿನ ಪ್ರತಿ ಎಳೆಯೂ ಮತ್ತೆ ಮೂರು ಎಳೆಗಳಿಂದ ಕೂಡಿರುತ್ತದೆ. ಅಂದರೆ ಜನಿವಾರವು ವಾಸ್ತವಾಂಶದಲ್ಲಿ ಒಟ್ಟು ಒಂಬತ್ತು ಎಳೆಗಳಿಂದ ಕೂಡಿರುತ್ತದೆ. ಈ ಒಂದೊಂದು ಎಳೆಗೂ ಒಬ್ಬ ಅಧಿದೇವತೆ. ಓಂಕಾರ , ಅಗ್ನಿ, ನಾಗ, ಚಂದ್ರ, ಪಿತೃ, ಪ್ರಜಾಪತಿ, ವಾಯು, ಸೂರ್ಯ, ವಿಶ್ವೇದೇವ ಇವರು ಆ ಒಂಬತ್ತು ಎಳೆಗಳಿಗೆ ಒಂಬತ್ತು ಅಧಿದೇವತೆಗಳು. ಈ ದೇವತೆಗಳನ್ನು ಆವಾಹಿಸಿ ಪೂಜೆ ಸಲ್ಲಿಸಿ ಯಜ್ನೋಪವೀತವನ್ನು ಧಾರಣ ಮಾಡಬೇಕು.

 ಜನಿವಾರವು 96 ಅನ್ಗುಲವೇ ಏಕಿರಬೇಕೆಂಬುದಕ್ಕೆ ಬೇರೆ ಬೇರೆ ಕಾರಣವನ್ನು ಹೇಳಲಾಗಿದೆ.

 ಈಗಿನ ಕಾಲದಲ್ಲಿ ಬಹುತೇಕ ಮಂದಿ ವಿಧ್ಯುಕ್ತವಾದ ಅನುಷ್ಠಾನವನ್ನು ಮಾಡದಿದ್ದರೂ ಎಂದಿನಿಂದಲೋ ಬಂದ ಒಂದು ಸಂಪ್ರದಾಯವೆಂದು ಜನಿವಾರವನ್ನು ಧರಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ ಅದರ ಶಕ್ತಿ ಕಳೆದುಹೋಗುತ್ತದೆ.

 [ ಪ್ರೊ: ಎಂ. ಎ. ಹೆಗಡೆಯವರ ' ಹಿಂದೂ ಸಂಸ್ಕಾರಗಳು ' ಪುಸ್ತಕದಿಂದ ಆಯ್ದು ಬರೆದದ್ದು ]

No comments:

Post a Comment

Note: only a member of this blog may post a comment.