Sunday 13 January 2019

#### ಮಕರ ಸಂಕ್ರಾಂತಿ ####

ಎಂ. ಗಣಪತಿ. ಕಾನುಗೋಡು. 

ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣವು ಸೂರ್ಯನ ಪಥ ಬದಲಾವಣೆಗೆ ಸಂಬಂಧಿಸಿದ ಪರ್ವದಿನ [ Transition Day ]. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳು ಪ್ರಯಾಣ ಬೆಳಸುತ್ತಾನೆ. ಪೌಷ್ಯ ಲಕ್ಷ್ಮಿಯ ಆಗಮನದ ತರುವಾಯ ಸೂರ್ಯನು ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನೇ ಮಕರ ಸಂಕ್ರಾಂತಿ ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತವಲ್ಲದೆ ಅರೇಬಿಯಾ, ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ರಾತ್ರಿ ಕಡಿಮೆ ಆಗಿ ಹಗಲು ಹೆಚ್ಚು ದೊರಕುತ್ತದೆ. 

ಮದುವೆಯಾದ ಮೊದಲ ವರ್ಷದಲ್ಲಿ ಮಕರ ಸಂಕ್ರಾಂತಿಯಂದು ಹತ್ತಿರದ ನೆಂಟರಿಷ್ಟರೊಂದಿಗೆ ಸೊಸೆಯನ್ನು ತವರಿಗೆ ಕರೆದೊಯ್ದು ತಾಯಿಗೆ ಸೋಸೆಯಿಂದ ಬಾಗೀನ ಕೊಡಿಸುವ ಪದ್ಧತಿ ಕೆಲವೆಡೆ ಇದೆ. ಕರ್ಕಾಟಕ ಸಂಕ್ರಾಂತಿಯಂದು ತವರ ಮನೆಯವರು ತಮ್ಮ ಹತ್ತಿರದ ಬಂಧು ಮಿತ್ರರೊಂದಿಗೆ ಬಂದು ಮಗಳ ಕೈಯಿಂದ ಗಂಡನ ಮನೆಯ ಹೊಸ್ತಿಲ ಪೂಜೆಯನ್ನು ಮಾಡಿಸುತ್ತಾರೆ. 

ಹಿಂದೂ ಪದ್ಧತಿಯಲ್ಲಿ ಪ್ರತಿಯೊಂದು ಮಾಸಕ್ಕೆ ತಕ್ಕಂತೆ ಒಂದೊಂದು ರಾಶಿ ಹಾಗೂ ಸಂಕ್ರಮಣ ಇದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯನು ಹೋಗುವುದೇ ಸಂಕ್ರಮಣ. ಅಂತೆಯೇ ಹನ್ನೆರಡು ರಾಶಿಗಳಿಗೆ ತಕ್ಕಂತೆ ಹನ್ನೆರಡು ಸಂಕ್ರಮಣಗಳು ಇವೆ. ಇವುಗಳಲ್ಲಿ ಮಕರ ಸಂಕ್ರಮಣ [ ಜನವರಿ 14 ] ಮತ್ತು ಕರ್ಕಾಟಕ ಸಂಕ್ರಮಣ [ ಜುಲೈ 16 ] ಗಳನ್ನು ಮುಖ್ಯವಾಗಿ ಆಚರಿಸಲಾಗುತ್ತದೆ. 

ಎಲ್ಲ ಸಂಕ್ರಮಣಗಳು ಪ್ರತಿ ತಿಂಗಳು 14 , 15 ಅಥವಾ 16 ನೆ ತಾರೀಖಿನಂದು ಮಾತ್ರ ಬರುತ್ತವೆ. ಈ ದಿನಗಳು ಶುಭ ಕಾರ್ಯಗಳಿಗೆ ಪ್ರಶಸ್ತವಲ್ಲ ಎನ್ನುತ್ತಾರೆ. ಸಂಕ್ರಮಣ ಕಾಲದಲ್ಲಿ ಶೃದ್ಧಾಭಕ್ತಿ ವಿವೇಕಗಳಿಂದ ಮಾಡುವ ಸ್ನಾನ, ಧ್ಯಾನ, ಹೋಮ, ಪೂಜೆ, ತರ್ಪಣ, ಶ್ರಾದ್ಧ , ಉಪವಾಸ ವ್ರತಗಳನ್ನು ನಡೆಸುವುದು ಒಳ್ಳೆಯದು ಎಂದು ಹೇಳಲಾಗಿದೆ. 

ಸಂಕ್ರಾಂತಿಯು ಪುಣ್ಯಕಾಲವೆಂದು ಪರಿಗಣಿತವಾದುದರಿಂದ ಅಂದು ಪುಣ್ಯತೀರ್ಥಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪ್ರಶಸ್ತ. ಹೀಗೆ ಮಾಡುವ ಸ್ನಾನವು ಶರೀರದ ಕೊಳೆಯನ್ನು ತೊಳೆಯುವ ಮಲಾಪಕರ್ಷಣ ಸ್ನಾನವಲ್ಲ. ಮಾನಸಿಕ ದೋಷಗಳನ್ನು ತೊಳೆಯುವ ಪುಣ್ಯಸ್ನಾನ. ಅದಕ್ಕಾಗಿ ಬಿಸಿನೀರಿನಿಂದ ಮಾಡುವ ಅಭ್ಯಂಜನಕ್ಕಿಂತ ಗಂಗಾದಿ ಪುಣ್ಯತೀರ್ಥಗಳಿಗೆ ಹೋಗಿ ಸಂಕಲ್ಪ ಪೂರಕವಾಗಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಪುಣ್ಯ ಸ್ನಾನವಾದ ನಂತರ ಶ್ರಾದ್ಧಕ್ಕೆ ಅಧಿಕಾರವುಳ್ಳವರು ಪಿತೃಗಳನ್ನೂ ಕುರಿತು ತರ್ಪಣಾದಿ ರೂಪದಲ್ಲಿ ಶ್ರಾದ್ಧ ಮಾಡಬೇಕು. ದಾನಧರ್ಮಗಳನ್ನು ಮಾಡಬೇಕು. 

ಧ್ಯಾನ ಧೀಕ್ಷೆ ಮತ್ತು ಮಂತ್ರಧೀಕ್ಷೆಯನ್ನು ಪಡೆಯುವುದಕ್ಕೆ ಇದು ಉತ್ತಮವಾದ ಕಾಲ. 

ಹಿಂದೂಗಳು ಮಕರ ಸಂಕ್ರಾಂತಿಯ ದಿನವನ್ನು ' ಉತ್ತರಾಯಣ ಪುಣ್ಯಕಾಲ ' ಎಂದು ಕರೆಯುತ್ತಾರೆ. ಏಕೆಂದರೆ ಸೂರ್ಯನಾರಾಯಣನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಹೆಜ್ಜೆಯಿಡಲು ಪ್ರಾರಂಭಿಸುವ ಪವಿತ್ರ ಸಮಯವಾಗಿರುತ್ತದೆ. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಮ್ಮವರ ನಂಬಿಕೆ. ಶರಶಯ್ಯೆಯ ಮೇಲೆ ಮಲಗಿದ್ದ ಇಚ್ಛಾಮರಣಿ ಭೀಷ್ಮರು ಸಹ ಕೊನೆಯುಸಿರನ್ನು ಎಳೆಯುವುದಕ್ಕಾಗಿ ಉತ್ತರಾಯಣ ಬರುವವರೆಗೆ ಕಾಯ್ದಿದ್ದರು. 

ಮಕರ ಸಂಕ್ರಾಂತಿಯ ದಿನದಿಂದ ದೇವತೆಗಳಿಗೆ ಹಗಲು ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ.

ಮಧ್ಯಾಹ್ನದ ಬೋಜನವಾದ ನಂತರ ಪರಿಕರ ಸಹಿತವಾದ ಎಳ್ಳು ಬೆಲ್ಲವನ್ನು, ಕಬ್ಬಿನ ಜಲ್ಲೆಯನ್ನು, ಸಕ್ಕರೆಯಿಂದ ಮಾಡಿದ ವಿಗ್ರಹಗಳನ್ನು ಹಂಚುವ ಪದ್ಧತಿ ಇದೆ. ಇವೆಲ್ಲವನ್ನೂ ಹಂಚಿ ಇಷ್ಟಮಿತ್ರರೊಂದಿಗೆ ಮಧುರ ಮಾತುಗಳನ್ನು ಆಡುತ್ತಾರೆ. ಸಾಮಾಜಿಕ ಸಂಬಂಧವನ್ನು ಘಟ್ಟಿಗೊಳಿಸಲು ಇದು ಒಂದು ಮಾರ್ಗ. ಸಾಗರದ ಕೆಲವು ಕಡೆ ಮದ್ಯಾಹ್ನದ ಊಟಕ್ಕೆ ಸಿಹಿ ಹೆಸರುಬೇಳೆ ಹುಗ್ಗಿ [ ಪೊಂಗಲ್ ] ಮತ್ತು ಸಿಹಿ ಬೆರಸದ ಪೊಂಗಲ್ , ಜೊತೆಗೆ ಹೊಸ ಹುಣಿಸೆ ಹಣ್ಣಿನ ಹುಳಿಗೊಜ್ಜನ್ನು ಮಾಡುತ್ತಾರೆ. 

ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವ ಪದ್ಧತಿ ಕೆಲವೆಡೆ ಇದೆ. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬೆಳೆದಿರುತ್ತದೆ. ಮನೆಯಲ್ಲಿ ಮಕ್ಕಳಿಗೆ ಅಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು [ ಬದರೀಫಲ] [ ಬೋರೆಯ ಹಣ್ಣು,ಎಲಚಿಹಣ್ಣು ] , ಕಬ್ಬು ಮೊದಲಾದುವುಗಳನ್ನು ಎರೆದು ಆರತಿ ಮಾಡುವ ಪದ್ಧತಿ ಕೆಲವೆಡೆ ಇದೆ. 

ಕೆಲವು ಕಡೆ ಹಸು , ಎಮ್ಮೆ ಮೊದಲಾದ ಜಾನುವಾರುಗಳಿಗೆ ಸ್ನಾನ ಮಾಡಿಸಿ ಅವುಗಳ ಕೋಡಿಗೆ , ಮೈಗೆ ಬಣ್ಣ ಬಳಿದು ಅಲಂಕರಿಸುತ್ತಾರೆ. ಅವುಗಳಿಗೆ ಪ್ರಿಯವಾದ ಹುಲ್ಲುಕಡ್ಡಿ, ಧಾನ್ಯ, ಕಾಯಿ, ಬೆಲ್ಲವನ್ನು ತಿನ್ನಿಸುತ್ತಾರೆ. ದೃಷ್ಟಿದೋಷ, ಪೀಡೆಯ ನಿವಾರಣೆಗಾಗಿ ಬೆಂಕಿಯ ಮೇಲೆ ದಾಟಿಸುವ ಪದ್ಧತಿ ಇದೆ. ಇದಕ್ಕೆ ಕಿಚ್ಚು ಹಾಯಿಸುವುದು ಎನ್ನುತ್ತಾರೆ. 

ಇನ್ನು ಕೆಲವು ಕಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಿಸಿನ - ಕುಂಕುಮ ಬಳಿದು ಹೂವು ಮುಡಿಸಿ ಪೂಜೆ ಮಾಡಿ ಬಿಡುವ ಪದ್ಧತಿ ಇದೆ. 

ಆಂದ್ರದಲ್ಲಿಯೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಲಾಗುತ್ತದೆ. ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಯ ಮುಂದೆ ಬೆಂಕಿಯನ್ನು ಹಾಕಿ ರಾವಣ ದಹನವನ್ನು ನಡೆಸುತ್ತಾರೆ. ಇದನ್ನು ' ಭೋಗಿಮಂಟ 'ಎಂದು ಕರೆಯುತ್ತಾರೆ. ಸ್ವರ್ಗಸ್ತರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ. 

ತಮಿಳುನಾಡಿನಲ್ಲಿ ಸಂಕ್ರಾಂತಿಯ ಹಬ್ಬವನ್ನು ' ಪೊಂಗಲ್ ' ಎಂದು ಕರೆಯುತ್ತಾರೆ. ವಿಶೇಷ ವಿಧಿಯಿಂದ ಹಾಲನ್ನು ಕಾಯಿಸಿ ಉಕ್ಕಿಸುವ ದಿನವಾದ್ದರಿಂದ ಅಲ್ಲಿ ಇದು ಪೊಂಗಲ್ ಎಂದು ಪ್ರಸಿದ್ಧವಾಗಿದೆ. ಪೊಂಗಲ್ಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಅದನ್ನು ಸೂರ್ಯನಿಗೆ ನೈವೇಧ್ಯ ಮಾಡುತ್ತಾರೆ. ಸಂಕ್ರಾಂತಿಯು ತಮಿಳರಿಗೆ ಸಂಭ್ರಮದ ಹಬ್ಬ. 

ಉತ್ತರ ಭಾರತದಲ್ಲಿಯೂ ಈ ಹಬ್ಬವನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳವನ್ನು ನಡೆಸುವ ಪದ್ಧತಿ ಇದೆ. 

ತಾರೀಖು :14 - 1 - 2018 .

No comments:

Post a Comment

Note: only a member of this blog may post a comment.