Monday 2 October 2017

%%%%% ಹೆಣದ ಹಿಂದೆ ಜನ ಕ್ಯೂನಲ್ಲಿ ಸಾಗುತಿದ್ದುದು ತಮ್ಮ ಸರದಿಗೋ ?. %%%%%


~~~~~ ಎಂ. ಗಣಪತಿ. ಕಾನುಗೋಡು.
ಮೊನ್ನೆ ನಮ್ಮ ಹತ್ತಿರದ ನಗರದಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಒಂದು ಹೆಣವನ್ನು ಹೊತ್ತು ಒಯ್ಯುತ್ತಿದ್ದರು. ಅದರ ಮುಂದೆ ಸತ್ತವನ ಮೊಮ್ಮಗ ಮಡಿಕೆಯಲ್ಲಿ ಅಗ್ನಿಯನ್ನು ಹಿಡಿದು ಸಾಗುತ್ತಿದ್ದ. ಅವನ ಹಿಂದೆ ಅವನು ಸಾಕಿದ ನಾಯಿ ಅವನನ್ನೇ ಹಿಂಬಾಲಿಸುತ್ತಿತ್ತು.
ಸಂಬಂಧಿಕರು ಒಂದು ಗುಂಪಾಗಿ ದುಃಖದಿಂದ ಹೆಣದ ಹಿಂದೆ ನಡೆದು ಹೋಗುತ್ತಿದ್ದರು. ಅವರ ಹಿಂದೆ ಸುಮಾರು ಹತ್ತು ಹದಿನೈದು ಜನ ' ಕ್ಯೂ ' ನಲ್ಲಿ ಖುಷಿಯಿಂದ ನಗುಮುಖದಿಂದಲೇ ಅವರನ್ನು ಹಿಂಬಾಲಿಸುತ್ತಿದ್ದರು.
ಶ್ಮಶಾನವನ್ನು ತಲುಪಬೇಕಿದ್ದರೆ ನಗರದ ಮಧ್ಯೆಯೇ ಸುಮಾರು ದೂರ ಹೆಣ ಸಾಗಬೇಕಾಗಿತ್ತು. ದಾರಿಯಲ್ಲಿ ಓಡಾಡುತ್ತಿದ್ದ ಜನ, ಅಂಗಡಿ ಮುಂಗಟ್ಟಿನಲ್ಲಿ ಇದ್ದ ಜನ, ಅಲ್ಲಲ್ಲಿ ಮನೆಯ ಮುಂದೆ ನಿಂತ ಜನ ಹೀಗೆ ಈ ದೃಶ್ಯವನ್ನು ನೋಡಿದವರಿಗೆ ಇದು ಒಂದು ಥರ ಕುತೂಹಲವೆನ್ನಿಸಿತು. ಏಕೆಂದರೆ ಒಂದಷ್ಟು ಮಂದಿ ದುಃಖದಿಂದ ಹೆಣವನ್ನು ಸುತ್ತುವರಿದುಕೊಂಡು ಗುಂಪಾಗಿ ಹೋಗುತ್ತಿದ್ದಾರೆ. ಇನ್ನು ಕೆಲವರು ಅವರ ಹಿಂದೆ ಸಾಲಾಗಿ ಸಂತೋಷದಿಂದ ಮುನ್ನೆಡೆಯುತ್ತಿದ್ದಾರೆ. ಏನಿದು..... ?, ಏನಿರಬಹುದು ..........?, ತಾವೂ ಸಾವಿನಲ್ಲಿ ಸತ್ತವನನ್ನು ಅನುಸರಿಸಲು ಅಷ್ಟು ಸಂತೋಷದಿಂದ ಸರದಿಯಲ್ಲಿ ಮುಂದೆ ನುಗ್ಗುತ್ತಿದ್ದಾರಾ ? ಎಂದು ಹಲವು ಬಗೆಯಲ್ಲಿ ಯೋಚಿಸ ಹತ್ತಿದರು.
ಇದಿಷ್ಟಕ್ಕೂ ನಡುನಡುವೆ ಆಗಾಗ ಒಬ್ಬೊಬ್ಬರಾಗಿಯೇ ಹೊರಗಿನಿಂದ ಬಂದು ' ಇವರು ಸತ್ತದ್ದು ಹೇಗೆ ? ಎಂದು ಗುಟ್ಟಾಗಿ ಅಗ್ನಿಯನ್ನು ಹಿಡಿದುಕೊಂಡ ಮೊಮ್ಮಗನ ಕಿವಿಯಲ್ಲಿ ಪ್ರಶ್ನೆ ಮಾಡುತ್ತಿದ್ದರು. ಅದಕ್ಕೆ ಅವನು ಏನನ್ನೋ ಗುಟ್ಟಾಗಿಯೇ ಉತ್ತರವನ್ನು ಕೊಡುತ್ತಿದ್ದ. ಹಾಗೆಯೇ ತಕ್ಷಣ ಆ ವ್ಯಕ್ತಿ ಹಿಂದಿನ ' ಕ್ಯೂ ' ನಲ್ಲಿ ಸೇರಿಕೊಳ್ಳುತ್ತಿದ್ದ. ಆ ' ಕ್ಯೂ' ಉದ್ದ ಬೆಳೆದದ್ದು ಹೀಗೆಯೇ.
ನಾನು ಹೇಗೋ ಆ ಸಂದರ್ಭಕ್ಕೆ ಅಲ್ಲಿಗೆ ಹೋಗಿದ್ದೆ. ನನಗೂ ಈ ದೃಶ್ಯವನ್ನು ನೋಡಿ ಕುತೂಹಲ ಕೆರಳಿತು. ಆ ಮೊಮ್ಮಗನ ಕಿವಿಯಲ್ಲಿ ಅವರೇನು ಕೇಳುತ್ತಿದ್ದಾರೆ, ಅದಕ್ಕೆ ಅವನೇನು ಉತ್ತರವನ್ನು ಕೊಡುತ್ತಿದ್ದಾನೆ, ಹಾಗೆ ಕೇಳಿಸಿಕೊಂಡವರು ತಕ್ಷಣ ' ಕ್ಯೂ ' ನಲ್ಲಿ ಏಕೆ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಪ್ರಶ್ನೆ ನನ್ನನ್ನು ಇನ್ನಷ್ಟು ಕುತೂಹಲಕ್ಕೀಡು ಮಾಡಿತು.
ಅಷ್ಟೊತ್ತಿಗೆ ಮತ್ತೊಬ್ಬ ಬಂದು ಆ ಮೊಮ್ಮಗನ ಕಿವಿ ಕಚ್ಚಲು ಶುರುಮಾಡಿದ. ವಿಷಯ ತಿಳಿದುಕೊಳ್ಳಲು ಈ ಸಮಯಕ್ಕೆ ಮೊಮ್ಮಗನ ಪಕ್ಕಕ್ಕೆ ಸೇರಿಕೊಂಡಿದ್ದ ನಾನು ಅವರಿಬ್ಬ ಗುಟ್ಟಿನ ಸಂಭಾಷಣೆಗೆ ಕಿವಿಯನ್ನು ಕೊಟ್ಟೆ. ಅದನ್ನು ಕೇಳಿ ನನಗೆ ತಲೆಯೇ ಕೆಟ್ಟು ಹೋಯಿತು. ಏಕೆ ?.
ಅವನ ಪ್ರಶ್ನೆ ಮತ್ತು ಮೊಮ್ಮಗನ ಉತ್ತರ ಹೀಗಿತ್ತು.
" ಇವರು ಸತ್ತದ್ದು ಹೇಗೆ ? ".
" ಮೊನ್ನೆ ನಾನು ಸಾಕಿದ ಈ ನಾಯಿ ನನ್ನ ಅಜ್ಜನನ್ನು ಕಚ್ಚಿತು. ಅದು ಕಚ್ಚಿ ಎರಡೇ ದಿನಗಳಲ್ಲಿ ನನ್ನ ಅಜ್ಜ ಸತ್ತು ಹೋದ ".
" ಹಾಗಾದರೆ ನಿನ್ನ ನಾಯಿಯನ್ನು ನನಗೆ ಒಂದು ವಾರದ ಮಟ್ಟಿಗೆ ಬಾಡಿಗೆಗೆ ಕೊಡು. ಅದಕ್ಕೆ ಬಾಡಿಗೆಯಾಗಿ ಒಂದು ಲಕ್ಷ ರುಪಾಯಿ ಕೊಡುತ್ತೇನೆ ".
ಅದಕ್ಕೆ ಉತ್ತರ ಪಡೆದವನು ತನ್ನ ಮೊದಲಿನವರಂತೆ ತಕ್ಷಣ ' ಕ್ಯೂ ' ನಲ್ಲಿ ಹೋಗಿ ನಿಂತದ್ದೂ ಆಯಿತು.
ಹಾಗಾದರೆ ಮೊಮ್ಮಗ ಹೇಳಿದ್ದೇನು ?.
" ಅದಕ್ಕಿಂತಲೂ ಹೆಚ್ಚು ಕೊಡುತ್ತೇನೆ ಎಂದು ಕೇಳಿದವರು ನಿಮಗಿಂತ ಮುಂಚೆ ' ಕ್ಯೂ ' ನಲ್ಲಿ ಇದ್ದಾರೆ. ಆದ್ದರಿಂದ ನಿಮಗೇ ತಕ್ಷಣವೇ ಕೊಡಲು ಸಾಧ್ಯವಿಲ್ಲ. ಬೇಕೇಬೇಕೆಂದಿದ್ದರೆ ಅದಕ್ಕಿಂತ ಹೆಚ್ಚು ಕೊಡಬೇಕು, ' ಕ್ಯೂ ' ನಲ್ಲಿ ಕಾಯಿರಿ. ".
ತಾರೀಖು : 23 - 9 - 2015 .
ವಿಷಯದ ಕೃಪೆ : ಸುಧಾ ವಾರಪತ್ರಿಕೆ.

No comments:

Post a Comment

Note: only a member of this blog may post a comment.