Monday 2 October 2017

ಹೀಗೆ ಸುಮ್ಮನೆ,

ಈಗ ಬೀಳುತ್ತಿರುವುದು 'ಹಸ್ತೆ' ಮಳೆ. [ 27 - 9 - 2017 ರಿಂದ 10 - 10 - 2017 ] ಇದು ಹನಿಯಿಕ್ಕಬೇಕು.ದುಮ್ಮೆದ್ದು ಹೊಯ್ಯಬಾರದು ಎಂದು ಎಂದಿನ ಅಭಿಪ್ರಾಯ. ' ಹಸ್ತೆ ಹನುಕಿ ಚಿತ್ತೆ ಬರಸಿ ಸತಿ ದುಮ್ಮೆದ್ದು ಹೊಯ್ದಾಗ ಸಮೃದ್ಧಿಯಾಗುವುದು ' ಎಂದು ಬಲ್ಲವರ ಮಾತು. ಆಗ ಬೆಳೆ,ಫಸಲು ಚೆನ್ನಾಗಿ ಆಗುತ್ತದೆ. ಕಾಳು ಚೆನ್ನಾಗಿ ತುಂಬುತ್ತದೆ. ವಜನ ಬರುತ್ತದೆ. ಅಡಕೆಯೂ ಫಸಲು ತುಂಬಿಬರುತ್ತದೆ ಎನ್ನುತ್ತಾರೆ. ಫಸಲು ಗುತ್ತಿಗೆ ಹಿಡಿಯುವವರು ಇದನ್ನೆಲ್ಲಾ ಲೆಕ್ಕಾಚಾರ ಹಾಕಿಕೊಂಡಿರುತ್ತಾರೆ. ಈಗ ಭತ್ತದ ಬೆಳೆ ಕೋಲು ಹೊಡೆಯಾಗಿರುತ್ತದೆ. ಅಂದರೆ ಅದು ತೆನೆಯಾಗಿ ಇನ್ನೂ ಅದರ ಎಲೆಗಳ ಸುತ್ತ ಮುಚ್ಚಿಕೊಂಡಿರುತ್ತದೆ. ಮೇಲ್ಭಾಗ ತೆರೆದುಕೊಂಡಿರುತ್ತದೆ. ಜೋರು ಮಳೆಯಾದರೆ ಅದರೊಳಗೆ ನೀರು ಮೀರಿ ಹೊಕ್ಕು ಭತ್ತ ಜೋಳ್ಳಾಗುತ್ತದೆ. ಹಸ್ತೆ ಮಳೆ ಅದಕ್ಕೆ ಆತಂಕ ಮಾಡದೆ ಬೆಳೆಯ ಸಮೃದ್ಧಿಗೆ ಪೂರಕವಾಗುತ್ತದೆ. ಚಿತ್ತೆ ಮಳೆ [೧೧-೧೦-೨೦೧೭ ರಿಂದ ೨೩-೧೦-೨೦೧೭ ] ಬರಸಬೇಕು.ಅದು ಬಂದರೆ ಬೆಳೆಗಳಿಗೆ ಹುಳು ಬೀಳುತ್ತದೆ. ಆ ಹುಳುವನ್ನು ನಿವಾರಿಸಲು ವಿಶಾಖೆ ಮಳೆ ಬೀಳಬೇಕು [೭-೧೧-೨೦೧೭ ರಿಂದ ೧೮-೧೧-೨೦೧೭] 'ಸ್ವಾತಿ ' ಮಳೆ [೨೪-೧೦-೨೦೧೭ ರಿಂದ ೬-೧೧-೨೦೧೭ ] ಚೆನ್ನಾಗಿ ಬರಬೇಕು. ಸ್ವಾತಿ ಮಳೆಯ ನೀರಿನಿಂದ ಹಾಲನ್ನು ಹೆಪ್ಪಿಡುತ್ತಾರೆ. ಅದು ಮರುದಿನ ಮೊಸರಾಗುತ್ತದೆ. ಒಂದು ಲೀಟರು ಹಾಲಿಗೆ ಸುಮಾರು ಐವತ್ತು ಮಿ. ಲೀ. ಸ್ವಾತಿ ನೀರು ಬೇಕಾಗಬಹುದು. ಹಳೆ ಮಜ್ಜಿಗೆಯನ್ನು ತೆಗೆದು ಹೊಸ ಮೊಸರನ್ನು ಮಾಡುವ ಈ ಕ್ರಮ ಬಹಳ ಹಿಂದಿನಿಂದ ಬಂದ ಸಂಪ್ರದಾಯ. ~~~~ ಎಂ.ಗಣಪತಿ ಕಾನುಗೋಡು.

No comments:

Post a Comment

Note: only a member of this blog may post a comment.