Tuesday 18 August 2020

## ದೇವಯಾನಿಯ ಪ್ರೇಮ ಪ್ರಕರಣ ##


ದೇವಯಾನಿಯು ಬ್ರಾಹ್ಮಣನೂ ಅಸುರರ ಗುರುವೂ ಆದ ಶುಕ್ರಾಚಾರ್ಯನ ಮಗಳು. ತನ್ನ ತಂದೆಯಿಂದ ಮೃತಸಂಜೀವಿನಿ ಮಂತ್ರ ಕಲಿಯಲು ತಮ್ಮ ಆಶ್ರಮಕ್ಕೆ ಗುರುಕುಲ ವಾಸಕ್ಕಾಗಿ ಬಂದ ಕಚನನ್ನು ಪ್ರೇಮಿಸುತ್ತಾಳೆ. ಆದರೆ ಅದು one way love ಆಗಿತ್ತು. ಕಚನು ಯಾವ ಕಾರಣಕ್ಕೂ ಅವಳನ್ನು ಪ್ರೇಮಿಸಲು ಸಿದ್ಧನಿರಲಿಲ್ಲ. ಆ ವಿಶಿಷ್ಟ ಮಂತ್ರವನ್ನು ಕಲಿತುಕೊಂಡು ಹೋಗುವುದೊಂದೇ ಅವನ ಮುಖ್ಯ ಗುರಿಯಾಗಿತ್ತು.

ಕಚನ ತಂದೆ ದೇವಗುರು ಬೃಹಸ್ಪತಾಚಾರ್ಯರು. ' ಮೃತ ಸಂಜೀವಿನಿ ಮಂತ್ರವನ್ನು ಕಲಿತುಕೊಂಡು ಬಂದರೆ ತಾನು ಮಾಡುವ ಯಜ್ಞ ದಲ್ಲಿ ಅವನಿಗೂ ಹವಿರ್ಭಾಗ ಸಿಗುತ್ತದೆ ' ಎಂದು ಅವನಿಗೆ ಹೇಳಿದ್ದರು. ' ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಸಂತೋಷಪಡಿಸಿದರೆ ನಿನಗೆ ಆ ವಿದ್ಯೆ ಸುಲಭವಾಗಿ ಲಭಿಸುತ್ತದೆ ' ಎಂದೂ ಅವನಿಗೆ ತಿಳಿಸಿದ್ದರು. ಹೇಗೂ ಆ ವಿದ್ಯೆಯನ್ನು ಕಲಿತುಕೊಂಡೆ ಬರಬೇಕು ಎನುವುದು ಅವನ ಮನೋತರಪೇತಿಯಾಗಿತ್ತು.
ಮೃತಸಂಜೀವಿನಿ ಮಂತ್ರ ಎಂದರೆ ಸತ್ತವರನ್ನು ಬದುಕಿಸುವ ಒಂದು ವಿಶೇಷ ಮಂತ್ರ . ಶುಕ್ರಾಚಾರ್ಯರು ಒಂದು ಸಾವಿರ ವರ್ಷ ಧೂಮಪಾನ ಮಾಡುತ್ತಾ ತಲೆಕೆಳಗಾಗಿ ತಪಸ್ಸನ್ನು ( ಧೂಮವ್ರತ ತಪಸ್ಸು ) ಮಾಡಿ ಶಿವನಿಂದ ಆ ವಿದ್ಯೆಯನ್ನು ಬಹಳ ಶ್ರಮದಿಂದ ತನ್ನ ವಶಮಾಡಿಕೊಂಡಿದ್ದರು. ದೇವತೆಗಳು ರಾಕ್ಷರನ್ನು ಕೊಂದಾಗ ಅವರೆಲ್ಲರನ್ನೂ ಶುಕ್ರಾಚಾರ್ಯ ಆ ಮಂತ್ರದ ಬಲದಿಂದ ಬದುಕಿಸಿಬಿಡುತ್ತಿದ್ದ. ಆದ್ದರಿಂದ ರಾಕ್ಷಸರು ದೇವತೆಗಳನ್ನು ಧ್ವಂಸ ಮಾಡಿದಾಗಲೂ ಬಳಸಿಕೊಳ್ಳಲು ಈ ಮಂತ್ರವನ್ನು ಹೇಗಾದರೂ ಮಾಡಿ ಕಲಿತುಕೊಂಡು ಬರಲಿಕ್ಕಾಗಿ ಕಚನನ್ನು ಬ್ರಹಸ್ಪತಿಯು ಶುಕ್ರಾಚಾರ್ಯನಲ್ಲಿಗೆ ಕಳಿಸಿರುತ್ತಾನೆ.

ಈ ಎಚ್ಚರ ಕಚನಿಗೆ ಬಹಳ ಚೆನ್ನಾಗಿ ಇತ್ತು. ಆ ಕಾರಣಕ್ಕಾಗಿ ಆತ ಶುಕ್ರಾಚಾರ್ಯರಲ್ಲಿ ಬಹಳ ಭಯ ಭಕ್ತಿಯಿಂದ ವರ್ತಿಸಿಕೊಂಡಿದ್ದ. ಯಾವ ಘಳಿಗೆಯಲ್ಲಿಯೂ ಅವರ ಮುನಿಸಿಗೆ ಕಾರಣವಾಗದಂತೆ ಅವನ ವರ್ತನೆ ಇತ್ತು. ತಾನು ಅಲ್ಲಿಗೆ ಬಂದ ಉದ್ದೇಶ ಈಡೇರಿಕೆಗಾಗಿ ತನ್ನ ದಾರಿ ತಪ್ಪದಂತೆ ಜಾಗರೂಕತೆ ವಹಿಸಿದ್ದ. ಎಷ್ಟು ಹೊತ್ತಿಗೂ ದೇವಯಾನಿಯ ಪ್ರೇಮದ ಬುಟ್ಟಿಗೆ ಅವನು ಬೀಳುವ ಪ್ರಮೇಯವೇ ಇರಲಿಲ್ಲ.

ಹಾಗಂತ ಆತ ತನ್ನ ತಂದೆಯ ಮಾತಿನಂತೆ ಅವಳನ್ನು ಸಂತೋಷಪಡಿಸುವುದರಲ್ಲೇ ನಿರತನಾಗಿದ್ದ . ಶುಕ್ರಾಚಾರ್ಯರ ಸೇವೆಯ ಜೊತೆಗೆ ಅವಳು ಹೇಳಿದ ಕೆಲಸವನ್ನೂ ಪ್ರತಿದಿನ ಮಾಡಿಕೊಡುತ್ತಿದ್ದ. ಅವಳನ್ನು ಸಂತೋಷಪಡಿಸುವುದಕ್ಕಾಗಿ ಹೂಗಳನ್ನು ಕೊಯ್ದು ತರುವುದು, ಅವುಗಳನ್ನು ಕಟ್ಟುವುದು ಹೀಗೆ... ಹೀಗೆ. ಕೆಸವಿನ ಎಲೆಯ ಮೇಲಿನ ನೀರಿನಂತೆ -- ಸ್ಪರ್ಶವಿದ್ದರೂ ಆಕರ್ಷವಿರಲಿಲ್ಲ. ದೇವಯಾನಿಯೂ ಏಕಾಂತದಲ್ಲಿ ಅವನೊಡನೆ ಆಡುವುದು, ಹಾಡುವುದು ಅಲ್ಲದೆ ಅವನ ಸೇವೆಯನ್ನು ಮಾಡುತ್ತಿದ್ದಳು -- ಒಣಹುಲ್ಲನ್ನು ಬೆಂಕಿ ಆಕರ್ಷಿಸುವ ಹಾಗೆ. ಹೊರಗಿನ ವರ್ತನೆ ಇಬ್ಬರದೂ ಒಂದೇ ಆಗಿ ಕಂಡರೂ ಒಳಗಿನ ಗುರಿ ಇಬ್ಬರದೂ ಬೇರೆ ಬೇರೆಯದೇ ಆಗಿತ್ತು. ದೇವಯಾನಿಯದು ಕಚನನ್ನು ಒಳಗೆ ಹಾಕಿಕೊಳ್ಳಬೇಕೆನ್ನುವುದು . ಕಚನದು ಮೃತಸಂಜೀವಿನಿ ವಿಶೇಷ ಮಂತ್ರವನ್ನು ಅವಳ ತಂದೆಯಿಂದ ಒಳಗೆ ಹಾಕಿಕೊಳ್ಳಬೇಕೆನ್ನುವುದು. ಅದಕ್ಕಾಗಿ ಶುಕ್ರಾಚಾರ್ಯರ ಪ್ರಿಯ ಶಿಷ್ಯನಾಗಿ ಬ್ರಹ್ಮಚರ್ಯ ವ್ರತದಲ್ಲಿಯೇ ಇದ್ದ.

ಕಚನು ಶುಕ್ರಾಚಾರ್ಯರಿಂದ ಆ ಮಂತ್ರವನ್ನು ಕಲಿಯಬಾರದು, ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಅಸುರರೂ ಹೊಂಚು ಹಾಕುತ್ತಿದ್ದರು. ಏಕೆಂದರೆ ಆ ಮಂತ್ರವು ತಮ್ಮ ಬಚಾವಿಗಾಗಿಯೇ ಶುಕ್ರಾಚಾರ್ಯರು ಸಂಪಾದಿಸಿಕೊಂಡಿದ್ದು. ಅದು ತಮ್ಮ ವಿರುದ್ಧದ ಒಂದು ಸನ್ನಾಹ ಎಂದು ಅವರಿಗೆ ಗೊತ್ತಿರಬೇಕು. ಅದಕ್ಕಾಗಿ ಅವರು ಅವನನ್ನು ಎರಡು ಸಾರಿ ಕತ್ತರಿಸಿ ಹಾಕಿದರು. ಆಗ ದೇವಯಾನಿಯು ತನ್ನ ತಂದೆಯ ಹತ್ತಿರ ಅವನನ್ನು ಮೃತ ಸಂಜೀವಿನಿ ಮಂತ್ರದಿಂದ ಬದುಕಿಸಿ ಎಂದು ಗೋಗರೆದಳು. ಏಕೆಂದರೆ ಅವಳು ಅಷ್ಟರ ಮಟ್ಟಿಗೆ ಅವನ ಭ್ರಮೆಯಲ್ಲಿ ಮುಳುಗಿದ್ದಳು. ಮಗಳ ಮಾತಿನಂತೆ ಶುಕ್ರಾಚಾರ್ಯ ಅವನನ್ನು ಎರಡು ಸಾರಿಯೂ ಬದುಕಿಸಿದ. ಇದನ್ನು ಕಂಡುಕೊಂಡ ರಾಕ್ಷರರು ಶುಕ್ರಾಚಾರ್ಯನ ಮೇಲೆ ಸಿಟ್ಟು ಮಾಡಿಕೊಂಡು ಮೂರನೆಯ ಸಲ ಕಚನನ್ನು ಕೊಂದು ಅವನ ದೇಹವನ್ನು ಉಳಿಸದೆ ಸುಟ್ಟು ಬೂದಿ ಮಾಡಿ ಮದ್ಯದಲ್ಲಿ ಹಾಕಿ ಶುಕ್ರಾಚಾರ್ಯರಿಗೇ ಕುಡಿಸಿದರು. ಏಕೆಂದರೆ ಆ ಮಂತ್ರದಿಂದ ಅವನನ್ನು ಬದುಕಿಸಲು ಹೊರಟರೆ ಅವರ ಹೊಟ್ಟೆ ಸೀಳಿ ಅವರೇ ಸಾಯುತ್ತಾರೆ. ಅದರಿಂದ ಅವರು ಅವನನ್ನು ಇನ್ನು ಬದುಕಿಸುವುದಿಲ್ಲ ಎನ್ನುವುದು ಅವರ ಯೋಚನೆ . ಅಂದು ಸಂಜೆ ಮನೆಗೆ ಬಾರದ ಕಚನನ್ನು ಅಂದೂ ಅವನು ಮತ್ತೆ ಸತ್ತಿರಬೇಕು ಎನ್ನುವುದನ್ನು ಗ್ರಹಿಸಿ ಅವನನ್ನು ಬದುಕಿಸಿಕೊಡಬೇಕೆಂದು ದೇವಯಾನಿ ಪುನಃ ತನ್ನ ತಂದೆಯನ್ನು ಕಟುವಾಗಿ ಒತ್ತಾಯಿಸಿದಳು. ಏಕೆಂದರೆ ಒಂದು ದಿನವೂ ಅವನನ್ನು ಬಿಟ್ಟು ಇರಲು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಮಗಳ ಒತ್ತಾಯಕ್ಕೆ ಮಣಿದು ಶುಕ್ರಾಚಾರ್ಯರು ಕಚನು ತನ್ನ ಹೊಟ್ಟೆಯಲ್ಲಿಯೇ ಇರುವುದನ್ನು ತಿಳಿಯದೆ ಸಂಜೀವಿನಿ ಮಂತ್ರವನ್ನು ಉಚ್ಚರಿಸುತ್ತಿರುವಾಗ ಅವರ ಹೊಟ್ಟೆಯಿಂದಲೇ ಕಚನು ' ನಾನು ನಿಮ್ಮ ಹೊಟ್ಟೆಯಲ್ಲಿಯೇ ಇದ್ದೇನೆ , ಹೇಗೆ ಹೊಟ್ಟೆಯನ್ನು ಸೀಳಿಕೊಂಡು ಬರಲಿ ' ಎನ್ನುತ್ತಾನೆ. ಆಗ ಶುಕ್ರಾಚಾರ್ಯರು ಹೊಟ್ಟೆಯಲ್ಲಿದ್ದ ಕಚನಿಗೆ ಮೃತಸಂಜೀವಿನಿ ಮಂತ್ರೋಪದೇಶ ಮಾಡಿದರು. ಆಚಾರ್ಯ ದೇಹದಿಂದ ಹೊರಬಂದು ಅವರಿಂದ ತಾನು ಪಡೆದ ಮಂತ್ರದ ಬಲದಿಂದ ಮರಳಿ ಅವರನ್ನು ಬದುಕಿಸುತ್ತಾನೆ. ಅಲ್ಲಿಗೆ ಕಚನಿಗೆ ತಾನು ಅಲ್ಲಿಗೆ ಬಂದ ಉದ್ದೇಶ ನೆರವೇರುತ್ತದೆ. ತಂದೆಯ ಮಾತಿನಂತೆ ಶುಕ್ರಾಚಾರ್ಯನುಗೆ ನಿಷ್ಟನಾಗಿದ್ದುದು ಹಾಗೆಯೇ ಅವನ ಮಗಳಿಗೆ ಸಂತೋಷವಾಗುವಂತೆ ತಾನು ನಡೆದುಕೊಂಡಿದ್ದು ಸಫಲವಾಗುತ್ತದೆ. ಮಾತಿನಂತೆ ಗಳಿಸಿದ ವಿದ್ಯೆಯ ಯಶಸ್ವಿ ಪ್ರಯೋಗವೂ ಅಲ್ಲಿಯೇ ನಡೆಯುತ್ತದೆ. ಆಚಾರ್ಯರ ಒಪ್ಪಿಗೆ ಪಡೆದು ದೇವಲೋಕಕ್ಕೆ ಮರಳಲು ಅಣಿಯಾಗುತ್ತಾನೆ.

ಇಲ್ಲಿಯೇ ದೇವಯಾನಿಯ ಪ್ರೇಮ ಪಾರಮ್ಯ ಸ್ಪೋಟವಾಗುತ್ತದೆ. ಇಷ್ಟೂ ದಿನ ನಾನು ನಿನ್ನನ್ನು ಬಹಳವಾಗಿ ಪ್ರೀತಿಸಿದೆ. ನಿನ್ನೊಡನೆ ಲಾಸ್ಯವಾಡಿದೆ. ನೀನೂ ನನ್ನೊಡನೆ ಸಹಕರಿಸಿದೆ. ಮೂರು ಸಲ ರಾಕ್ಷಸರು ನಿನ್ನನ್ನು ಕಡಿದು ಕೊಚ್ಚಿ ಕೊಂದು ಹಾಕಿದರೂ ನನ್ನ ಅಪ್ಪನಿಗೆ ದುಂಬಾಲು ಬಿದ್ದು ನಿನ್ನನ್ನು ಬದುಕಿಸಿಕೊಂಡೆ. ಇಷ್ಟೆಲ್ಲಾ ಮಾಡಿದ್ದು ನೀನು ನನಗೆ ಬೇಕು ಎಂದಲ್ಲವೇ ?. ನಿನ್ನನ್ನು ನಾನು ಬಹಳವಾಗಿ ಮನಸಾ ಹಚ್ಚಿಕೊಂಡಿದ್ದೇನೆ. ನನ್ನನ್ನು ಪಾಣಿಗ್ರಹಣ ಮಾಡಿಕೊ ಎಂದು ಕಚನಿಗೆ ಜೋತು ಬೀಳುತ್ತಾಳೆ. ಎಂದೂ ಅವಳು ಅವನ ಮನಸಿನಲ್ಲಿ ಇರಲಿಲ್ಲ . ಇದ್ದುದು ಮಂತ್ರವಿದ್ಯೆಯ ಗಳಿಕೆಯೊಂದೇ. ಅದು ಪೂರೈಸಿತ್ತು.
' ನೀನು ನನಗೆ ಗುರುಪುತ್ರಿ.ನನಗೆ ಪೂಜ್ಯಳು . ನಿನ್ನನ್ನು ಮದುವೆಯಾಗಲಾರೆ' ಎಂದು ತಿರಸ್ಕರಿಸಿ ಹೊರಟುಹೋದ. ಆಗ ದೇವಯಾನಿಯು ಅಶಾಭಂಗಳಾಗುತ್ತಾಳೆ. ಭಗ್ನಪ್ರೇಮಿಯಾಗುತ್ತಾಳೆ. ಹತಾಶಳಾಗಿ ತನ್ನ ತಂದೆಯಿಂದ ಕಲಿತ ಮಂತ್ರವಿದ್ಯೆ ನಿನಗೆ ಫಲಿಸದಿರಲಿ ಎಂದು ಶಪಿಸುತ್ತಾಳೆ. 'ನನಗಲ್ಲದಿದ್ದರೂ ನನ್ನಿಂದ ಉಪದೇಶ ಪಡೆದವರಿಗೆ ಅದು ಫಲಿಸಿದರೆ ಸಾಕು' ಎಂದು ಎಂದು ಕಚ ಅಲ್ಲಿಗೂ ಸ್ಥಿತಪ್ರಜ್ಞನಾಗಿಯೇ ಇರುತ್ತಾನೆ. ಜೊತೆಗೆ , ' ನೀನು ಮಾತ್ರ ಸಂಪನ್ನನಾದ, ವಿದ್ವಾಂಸನಾದ ಬ್ರಾಹ್ಮಣಶ್ರೇಷ್ಠನ ಮಗಳಾಗಿದ್ದರೂ ಧರ್ಮವಿರುದ್ಧವಾದ ಕಾರ್ಯದಲ್ಲಿ ನನಗೆ ಇಷ್ಟವಿಲ್ಲದೆ ಇದ್ದರೂ ನನ್ನನ್ನು ಬಲಾತ್ಕರಿಸಿದೆ. ಅದಕ್ಕಾಗಿ ಯಾವ ಬ್ರಾಹ್ಮಣನೂ ನಿನ್ನನ್ನು ಮದುವೆಯಾಗದೇ ಇರಲಿ ಎಂದು ಮರುಶಾಪ ಕೊಟ್ಟು ಹೊರಟುಹೋಗುತ್ತಾನೆ. ಇದರಿಂದ ದೇವಯಾನಿ ಮತ್ತಷ್ಟು ಹತಾಶಳಾಗುತ್ತಾಳೆ.
ಅದಕ್ಕಾಗಿಯೇ ದೇವಯಾನಿ ಮತ್ತೊಂದು ದಿನ ಯಯಾತಿ ಎನ್ನುವ ಕ್ಷತ್ರಿಯನನ್ನು ಮದುವೆಯಾಗುವ ಪ್ರಸಂಗ ಬರುತ್ತದೆ. ಅದೂ ಕೂಡ ಒಂದು ರೀತಿಯಲ್ಲಿ ಪ್ರೇಮ ವಿವಾಹವೇ. ತನ್ನ ಗೆಳತಿಯಿಂದ ಬಾವಿಯಲ್ಲಿ ನೂಕಲ್ಪಟ್ಟು ಆ ಸಮಯದಲ್ಲಿ ಮೇಲೆತ್ತಿ ಬದುಕಿಸಿದ ಒಬ್ಬ ಕ್ಷತ್ರಿಯನಾದ ಯಯಾತಿಯನ್ನು ಮೆಚ್ಚಿ ತನ್ನನ್ನೇ ಮದುವೆಯಾಗಲು ಒತ್ತಾಯಿಸಿ ಮದುವೆಯಾಗುತ್ತಾಳೆ. ಆ ಮದುವೆಯ ನಂತರವೂ ತನ್ನ ದಾಸಿಯೊಡನೆ ದೈಹಿಕ ಸಂಪರ್ಕ ಹೊಂದಿದನೆಂಬ ಸಿಟ್ಟಿಗೆ ತನ್ನ ಅಪ್ಪ ಶುಕ್ರಾಚಾರ್ಯರಿಂದ ತನ್ನ ಗಂಡ ಯಯಾತಿಗೆ ಅಕಾಲ ಮುಪ್ಪು ಬರಲಿ ಎಂದು ಶಾಪವನ್ನು ಕೊಡಿಸಿ ಅವನ ಬದುಕನ್ನೂ ಹಾಳುಗೆಡುವುತ್ತಾಳೆ. ತಾನೂ ತೊಂದರೆಗೆ ಸಿಲುಕಿಕೊಳ್ಳುತ್ತಾಳೆ.
love ಎನ್ನುವುದು ಏಕಮುಖವಾಗಿದ್ದರೆ, ಅದು ವಿವೇಚನಾಪೂರಿತವಾಗದೆ ಇದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಗೆ ದೇವಯಾನಿಯ ಪ್ರೇಮ ಪ್ರಕರಣವೇ ಒಂದು ಉತ್ತರವಾಗುತ್ತದೆ.


~~~~~ ಎಂ. ಗಣಪತಿ ಕಾನುಗೋಡು.
ತಾರೀಖು : 9 - 7 - 2020

No comments:

Post a Comment

Note: only a member of this blog may post a comment.