Tuesday 18 August 2020

## ದರ್ಭೆಯಲ್ಲಿ ಭಿನ್ನತೆಗಳು ##


$$ ದರ್ಭೆಯಲ್ಲಿ ಏಳು ಬಗೆಗಳಿವೆ. ವಿಶ್ವಾಮಿತ್ರ, ಕುಶ, ಕಾಶ, ಭತ್ತ, ನಸ, ವಯ.ಮತ್ತು ದೂರ್ವಾ [ ಗರಿಕೆ ಹುಲ್ಲು ]. ರುದ್ರ ಸಂಬಂಧವಾದ ಮತ್ತು ಆಭಿಚಾರಕ ಕೃತ್ಯಗಳಲ್ಲಿ 'ಕಾಶ' ಎನ್ನುವ ದರ್ಭೆಯನ್ನು ಬಳಸಬೇಕು. ಬ್ರಾಹ್ಮಣ ಸಂಸ್ಕಾರಗಳಾದ ಶ್ರೌತ ಸ್ಮಾರ್ತ ಕರ್ಮಗಳಲ್ಲಿ 'ಕುಶ' ದರ್ಭೆಯನ್ನು ಬಳಸಬೇಕು. ಉಪಾಕರ್ಮವೇ ಮುಂತಾದ ಋಷಿ ಪೂಜಾ ಕಾರ್ಯಗಳಲ್ಲಿ 'ದೂರ್ವಾ' ದರ್ಭೆಯನ್ನು ಬಳಸಬೇಕು. ಸುದರ್ಶನ ಹೋಮವೇ ಮೊದಲಾದ ವೈಷ್ಣವ ಕಾರ್ಯದಲ್ಲಿ 'ವಿಶ್ವಾಮಿತ್ರ' ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಗಳಿಗೆ ಹೇಳಿರುವ ನಿರ್ಧಿಷ್ಟ ದರ್ಭೆಗಳು ಸಿಗದಿದ್ದ ಅನಿವಾರ್ಯ ಸನ್ನಿವೇಶದಲ್ಲಿ ಈ ಏಳು ವಿಧ ದರ್ಭೆಗಳಲ್ಲಿ ಯಾವುದೇ ದರ್ಭೆಯನ್ನಾದರೂ ಎಲ್ಲಾ ಕಾರ್ಯಗಳಲ್ಲಿಯೂ ಬಳಸಬಹುದು.
$$ ಮೇಲೆ ಹೇಳಿದ ದರ್ಭೆಗಳಲ್ಲಿ ಲಿಂಗ ಬೇಧವಿದೆ. ದರ್ಭೆಯ ತುದಿ ಭಾಗ [ ಅಗ್ರ ಭಾಗ ] ಸ್ಥೂಲವಾಗಿದ್ದರೆ ಅವು ಸ್ತ್ರೀ ದರ್ಭೆ. ಬುಡದಿಂದ ತುದಿಯವರೆಗೂ ಸಮವಾಗಿದ್ದರೆ ಪುರುಷ ದರ್ಭೆ. ಬುಡ [ ಮೂಲ ಭಾಗ ] ದಪ್ಪನಾಗಿದ್ದರೆ ನಪುಂಸಕ ದರ್ಭೆ.

ಚೌಲ, ಉಪನಯನ, ಉಪಾಕರ್ಮ, ವ್ರತ ಸಮಾವರ್ತನಾದಿ ಪುರುಷ ಸಂಸ್ಕಾರ ಕಾರ್ಯಕ್ರಮಗಳಲ್ಲಿ, ಗಂಡು ಮಗುವಿನ ಜಾತಕರ್ಮ ಇತ್ಯಾದಿ ಪುರುಷ ಸಂಸ್ಕಾರಗಳಲ್ಲಿ ಪುರುಷ ದರ್ಭೆಯನ್ನು ಬಳಸಬೇಕು. ಗರ್ಭಾದಾನ, ಪುಂಸುವನ, ಸೀಮಂತೋನ್ನಯನ ಕರ್ಮಗಳಲ್ಲಿ, ಹೆಣ್ಣು ಶಿಶುವಿನ ಜಾತಕರ್ಮ, ನಾಮಕರಣ, ಅನ್ನಪ್ರಾಶನ ಸಂಸ್ಕಾರಗಳಲ್ಲಿ ಸ್ತ್ರೀ ದರ್ಭೆಯನ್ನು ಬಳಸಬೇಕು. ಉಭಯ ಸಂಸ್ಕಾರ ರೂಪವಾದ ವಿವಾಹದಲ್ಲಿ ಸ್ತ್ರೀ ಪುರುಷ ಈ ಎರಡು ದರ್ಭೆಯನ್ನೂ ಬಳಸಬೇಕು. ಶಾಂತಿ ಕರ್ಮಗಳಲ್ಲಿ ನಪುಂಸಕ ದರ್ಭೆಯನ್ನು ಬಳಸಬೇಕು.
ಆಯಾ ಕಾರ್ಯಕ್ರಮದಲ್ಲಿ ನಿರ್ಧಿಷ್ಟ ಲಿಂಗಬೇಧದ ದರ್ಭೆಗಳು ಸಿಗದಿದ್ದರೆ ಅನಿವಾರ್ಯದಲ್ಲಿ ಎಲ್ಲಾ ಕಾರ್ಯಕ್ರಮದಲ್ಲಿ ಯಾವ ಲಿಂಗದ ದರ್ಭೆಯನ್ನಾದರೂ ಬಳಸಬಹುದು.

[ ಸೂಚನೆ :ಈ ವಿಚಾರಗಳನ್ನು ಎಲ್ಲರೂ ಅನುಸರಿಸುತ್ತಾರೆ ಎಂದು ಭಾವಿಸಿ ನಾನು ಇದನ್ನು ಬರೆಯುತ್ತಿಲ್ಲ. ಆದರೆ ವಿಷಯ ಹೀಗೂ ಇದೆ ಎಂದು ಎಲ್ಲರಿಗೂ ಗೊತ್ತಿರಲಿ ಎಂದು ಬರೆಯುತ್ತಿದ್ದೇನೆ. ]

ಗ್ರಂಥಋಣ : ಸಂಸ್ಕಾರ ಮಹೋದಧಿ -- ಡಾ| ಎ. ಅನಂತನರಸಿಂಹಾಚಾರ್

No comments:

Post a Comment

Note: only a member of this blog may post a comment.