Tuesday 18 August 2020

## ಉಪಾಕರ್ಮ ##


ಉಪಾಕರ್ಮ ಎನ್ನುವ ಶಬ್ದವು ಅಧ್ಯಯನದ ಆರಂಭ ಎಂದು ಅರ್ಥವನ್ನು ಹೊಂದಿದೆ. ಇದನ್ನು ಉಪಾಕರ್ಮ, ಅಧ್ಯಾಯೋಪಕರ್ಮ, ಉಪಾಕರಣ, ವೇದಸ್ವೀಕಾರ, ವೇದಾರಂಭಣ, ಎಂಬ ಹೆಸರುಗಳಿಂದ ಶಾಸ್ತ್ರಗಳು ಕರೆಯುತ್ತವೆ. ಉತ್ತರ ಭಾರತದಲ್ಲಿ ಇದಕ್ಕೆ ಶ್ರಾವಣದಲ್ಲಿ ಆಚರಿಸಲ್ಪದುವುದರಿಂದ 'ಶ್ರಾವಣೀ' ಎಂದು ಕರೆಯುತ್ತಾರೆ. ತಮಿಳುನಾಡಿನವರು 'ಆವಣಿ ಅವಿTTam' ಎನ್ನುತ್ತಾರೆ. ಇಂದು ಇದು ಜನಿವಾರವನ್ನು ಬದಲಾಯಿಸಿಕೊಳ್ಳುವ ಮತ್ತು ರಕ್ಷಾ ಬಂಧನದ ಹಬ್ಬವಾಗಿ ಆಚರಿಸುವುದಕ್ಕಾಗಿ 'ನೂಲು ಹುಣ್ಣಿಮೆ' ಎಂದೂ ಕರೆಯುತ್ತಾರೆ.
ಉಪಾಕರ್ಮವು ವೇದಗಳ ಒಂದು ಅಧ್ಯಯನ ವ್ರತವಾಗಿತ್ತು. ಆದರೆ ನಾವು ಅದನ್ನು ಇಂದು ಹೊಸ ಜನಿವಾರವನ್ನು ಹಾಕಿಕೊಳ್ಳುವ ಹಬ್ಬವೆಂದು ಆಚರಿಸುತ್ತಿದ್ದೇವೆ. ಹಿಂದೆ ಶಾಲೆ ಕಾಲೇಜುಗಳಿಲ್ಲದ ಕಾಲದಲ್ಲಿ, ಕೇವಲ ವೇದ, ಶಾಸ್ತ್ರಗಳ ಅಧ್ಯಯನವಿರುವ ಪ್ರಾಚೀನ ಕಾಲದಲ್ಲಿ ಗುರುಕುಲದಲ್ಲಿ ವಟುವು ತನ್ನ ಉಪನಯನದ ನಂತರ ವೇದ ವಿಧ್ಯಾಭ್ಯಾಸವನ್ನು ಸಂಸ್ಕಾರಪೂರ್ವಕವಾಗಿ ಗ್ರಹಿಸುವ ಮತ್ತು ಪ್ರಾರಂಭಿಸುವ ವ್ರತಕ್ಕೆ ಉಪಾಕರ್ಮವೆಂದು ಹೆಸರು.. ಪ್ರತಿಯೊಂದು ವ್ರತದಲ್ಲಿಯೂ ಹಿಂದೆ ಬಳಸಿದ ಮೌಂಜೀ, ದಂಡ , ವಸ್ತ್ರ ಹಾಗೆಯೇ ಜನಿವಾರ ಮತ್ತು ಕೃಷ್ಣಾಜಿನವನ್ನು ತೆಗೆದುಹಾಕಿ ಹೊಸತನ್ನು ಧರಿಸುವುದು ರೂಢಿಯಾಗಿತ್ತು. ಅದರಂತೆ ಉಪಾಕರ್ಮದಲ್ಲಿಯೂ ಈ ಎಲ್ಲಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಅಂದು ಉಪಾಕರ್ಮದಲ್ಲಿ ಯಜ್ನೋಪವೀತದ ಬದಲಾವಣೆಯು ಒಂದು ಗೌಣಕರ್ಮವಾಗಿತ್ತು. ಆಗ ಎಲ್ಲದರ ಜೊತೆಗೆ ಇದೂ ಒಂದಾಗಿತ್ತು. ಆದರೆ ಕಾಲಾನುಕ್ರಮದಲ್ಲಿ ಅದೊಂದು ಮಾತ್ರ ಉಳಿದುಕೊಂಡಿದೆ.

ಶ್ರಾವಣ ಪೂರ್ಣಿಮೆಯಂದು ಸಾಮಾನ್ಯವಾಗಿ ಉಪಾಕರ್ಮವನ್ನು ಅನಾದಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅಂದು ಗ್ರಹಣ , ಸಂಕ್ರಮಣಾದಿಗಳ ಸಂಭವವಿದ್ದರೆ ಆಷಾಢ ಪೂರ್ಣಿಮೆಯು ಪ್ರಶಸ್ತ ಎನ್ನಲಾಗಿದೆ. ಋಗ್ವೇದಿಗಳು, ಯಜುರ್ವೇದಿಗಳು ಮತ್ತು ಸಾಮವೇದಿಗಳಲ್ಲಿ ಉಪಾಕರ್ಮದ ಆಚರಣೆಯ ಕಾಲದಲ್ಲಿ ವ್ಯತ್ಯಾಸವಿದೆ.

ಗುರುಕುಲದಲ್ಲಿ ಗುರು ಶಿಷ್ಯರೆಲ್ಲಾ ಸೇರಿ ಉಪಾಕರ್ಮ ಹೋಮ ಮಾಡಿ ಇತರ ವಿಧಿವಿಧಾನಗಳನ್ನೂ ಪೂರೈಸಬೇಕಾಗಿತ್ತು. ಉಪಾಕರ್ಮದ ಕ್ರಿಯೆಗಳು ಅರ್ಥವತ್ತಾಗಿದ್ದುವು. ಇಲ್ಲಿ ಪ್ರಾಚೀನ ಸ್ಮರಣೆಗಳು ನಡೆಯುತ್ತವೆ. ದೇವತೆಗಳು , ಪಿತೃಗಳು, ಋಷಿಗಳು, ವಾನ್ಗ್ಮಯದ ಶ್ರೀಮಂತಿಗೆಗೆ ನೆರವಿತ್ತ ಹಿರಿಯರು ಮುಂತಾದವರ ನಾಮಸ್ಮರಣೆ ಮಾಡಿ ತರ್ಪಣ ಕೊಡುವುದು , ಆಹುತಿ ಕೊಡುವುದು ಮುಂತಾದ ಕ್ರಮಗಳಿವೆ. ಇದರಿಂದಾಗಿ ಅಧ್ಯಯನ ಕಾರ್ಯಕ್ಕೆ ನವೋಲ್ಲಾಸ ಬರುತ್ತದೆ ಎಂದು ಭಾವಿಸಲಾಗುತ್ತಿತ್ತು. ಇಂದಿಗೂ -- ಅದರ ಮೂಲ ಉದ್ದೇಶದಲ್ಲಿ ಬದಲಾವಣೆ ಆದರೂ -- ಅದರ ಕೆಲವೊಂದು ಕ್ರಿಯೆಗಳು ಉಪಾಕರ್ಮ ವ್ರತದ ಆಚರಣೆಯಲ್ಲಿ ಉಳಿದುಕೊಂಡಿವೆ.

ಹಿಂದಿನ ಕಾಲದಲ್ಲಿ ಅಧ್ಯಯನ ವಿಷಯಗಳು ಪ್ರಧಾನವಾಗಿ ವೇದಗಳು ಮತ್ತು ಶಾಸ್ತ್ರಗಳು ಎಂದು ಎರಡು ಭಾಗವಾಗಿದ್ದುವು. ಗುರುಕುಲದಲ್ಲಿ ಐದೂವರೆಯಿಂದ ಆರು ತಿಂಗಳುಗಳ ಕಾಲ ವೇದಾಭ್ಯಾಸವನ್ನು ಮಾಡುವ ಪರಿಪಾಠವಿತ್ತು . ಅ ಅವಧಿಯ ನಂತರ ಉತ್ಸರ್ಜನ ಅಂದರೆ ಆ ವ್ರತದ ಉದ್ವಾಸನೆ ಇತ್ತು. ಆ ಅವಧಿಯ ಕಾಲದಲ್ಲಿ ಗುರುಕುಲದ ವಿದ್ಯಾಭ್ಯಾಸಕ್ಕೆ ರಜೆಯಿತ್ತು. ಅಂದರೆ ಶ್ರಾವಣ ಪೂರ್ಣಿಮೆಯಂದು ಆರಂಭವಾದರೆ ಪುಷ್ಯ ಅಥವ ಮಾಘ ಶುದ್ಧ ಪ್ರತಿಪದೆಯಂದು ಪೂರ್ವಾಹ್ನದಲ್ಲಿಯೇ ಉತ್ಸರ್ಜನವನ್ನು ಮಾಡಲಾಗುತ್ತಿತ್ತು. ಆ ಅವಧಿಯಲ್ಲಿ ವಟುಗಳು ಶಾಸ್ತ್ರಾಭ್ಯಾಸವನ್ನು ಮಾಡುತ್ತಿದ್ದರು ಎನ್ನಲಾಗಿದೆ. ಆ ರಜೆಯ ಅವಧಿಯ ನಂತರ ಪುನಃ ಗುರುಕುಲದಲ್ಲಿ ಪ್ರತಿ ವರ್ಷ ಉಪಾಕರ್ಮದ ಮೂಲಕವೇ ವೇದಾಭ್ಯಾಸವನ್ನು ಪ್ರಾರಂಭ ಮಾಡುತ್ತಿದ್ದರು. ಆಗ ಎಂದಿನಂತೆ ವ್ರತ ನಿಯಮದ ಪ್ರಕಾರ ತಮ್ಮ ಎಲ್ಲಾ ವಸ್ತುಗಳ ಜೊತೆಗೆ ಸಾಮಾನ್ಯವೆಂಬಂತೆ ಜನಿವಾರವನ್ನೂ ಬದಲಾಯಿಸಿಕೊಳ್ಳುತ್ತಿದ್ದರು. ಅದರಂತೆ ಮತ್ತೆ ಹಸನಾಗಿ, ಹೊಸತನದಲ್ಲಿ ಮರು ಅಧ್ಯಯನಕ್ಕೆ ಸಂಭ್ರಮದಲ್ಲಿ ಅಣಿಯಾಗುತ್ತಿದ್ದರು.

ಕೇವಲ ವಟುಗಳು ಆಚರಿಸುವ ವ್ರತ , ಉಪಾಕರ್ಮದಲ್ಲಿ ಗ್ರಹಸ್ಥರು ಹೇಗೆ ಬಂದರು ಎನ್ನುವುದು ಕುತೂಹಲದ ಪ್ರಶ್ನೆ. ಆಗ ಎಲ್ಲರೂ ವೇದಾಧ್ಯಯನವನ್ನು ಮಾಡುತ್ತಿದ್ದ ಕಾಲ. ವಿದ್ಯಾಭ್ಯಾಸದ ನಂತರದಲ್ಲಿ ತಮ್ಮ ತಮ್ಮ ಉದ್ಯೋಗದಲ್ಲಿ ಜನ ನಿರತರಾಗಿರುತ್ತಿದ್ದರು. ಈಗಿನ ಕಾಲದ ಹಾಗೆ ಅವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪುಸ್ತಕಗಳಾಗಲಿ, ಪುಸ್ತಕ ಭಂಡಾರವಾಗಲಿ ಇರಲಿಲ್ಲ. ಬೇರೆ ಬೇರೆ ಉದ್ಯೋಗದಲ್ಲಿ ನಿರತರಾದ ಅಂದಿನ ವೇದ ಶಾಸ್ತ್ರ ಪಾರಂಗತರು ಅವನ್ನು ಪುನರಾವರ್ತನೆ ಮಾಡಿಕೊಳ್ಳಲು ಹೆಚ್ಚು ಕೆಲಸವಿಲ್ಲದ ಮಳೆಗಾಲದ ಅವಧಿಯನ್ನು ಅಧ್ಯಯನಕ್ಕಾಗಿ ಮೀಸಲಿಡುವುದು, ಅವರು ತಮ್ಮ ತಮ್ಮ ಮನೆಯೊಳಗಿದ್ದುಕೊಂಡೇ ವೇದಾಧ್ಯಯನವನ್ನು ಮುಂದುವರೆಸುವ ವ್ಯವಸ್ಥೆಯಾಯಿತು. ಇಂಥ ಅಧ್ಯಯನವನ್ನು ಆರಂಭಿಸುವ ಮುನ್ನ ಉಪಾಕರ್ಮದ ದಿನ ತಮ್ಮ ಮಕ್ಕಳ ಜೊತೆ ಪಾಲಕರೂ -- ಗ್ರಹಸ್ಥರು -- ಗುರುಕುಲಕ್ಕೆ ಬಂದು ಅಧ್ಯಯನ ವ್ರತವನ್ನು ಸ್ವೀಕರಿಸುವ ವ್ಯವಸ್ಥೆಯಾಯಿತು. ಹೀಗೆ ಅಂದು ಆ ವ್ರತವನ್ನು ಸ್ವೀಕರಿಸುವ ಪ್ರತಿ ಗ್ರಹಸ್ಥನೂ ಬ್ರಹ್ಮಚಾರಿಯು ಅನುಸರಿಸುವ ವ್ರತನಿಯಮಗಳಲ್ಲಿ ದಂಡ ಇತ್ಯಾದಿಗಳನ್ನು ಬಿಟ್ಟು ಜನಿವಾರ ಬದಲಾವಣೆಯೂ ಸೇರಿ ಉಳಿದವುಗಳನ್ನು ಅನುಸರಿಸಬೇಕಾಗಿತ್ತು.

ಅಂದರೆ ಉಪಾಕರ್ಮವು ಒಂದು ಕಾಲದಲ್ಲಿ ಕೇವಲ ವಟುಗಳು ತಮ್ಮ ಅಧ್ಯಯನಕ್ಕಾಗಿ ಅದರ ಪ್ರಾರಂಭದಲ್ಲಿ ತಮ್ಮ ಗುರುಕುಲದ ಗುರುಗಳ ಮನೆಯಲ್ಲಿ ಆಚರಿಸಿಕೊಳ್ಳುವ ಹಲವು ವಿಧಿ ವಿಧಾನದ ಒಂದು ವ್ರತ. ಅವನು ಗ್ರಹಸ್ಥನಾದ ನಂತರ ಅದನ್ನು ಆಚರಿಸುವ ಪ್ರಮೇಯವಿರಲಿಲ್ಲ. ಏಕೆಂದರೆ ಅದು ಕೇವಲ ಉಪನಯನದಾದ ವಟುವಿನ ವೇದಾಧ್ಯಯನದ ಪ್ರಾರಂಭದ ಒಂದು ವ್ರತವಾಗಿತ್ತಷ್ಟೇ. ಆದರೆ ಕಾಲ ಕ್ರಮೇಣ ಗ್ರಹಸ್ಥನೂ ತನ್ನ ವೇದಾಧ್ಯಯನದ ಪಾಂಡಿತ್ಯವನ್ನು ಉಳಿಸಿಕೊಳ್ಳುವ ಸಂಬಂಧ ಪ್ರತಿ ವರ್ಷದ ಒಂದು ಅವಧಿಯಲ್ಲಿ -- ಹೆಚ್ಚಾಗಿ ತನಗೆ ಪುರುಸೊತ್ತು ಇರುವ ಮಳೆಗಾಲದಲ್ಲಿ-- ಅವುಗಳನ್ನು ಮರು ಅಧ್ಯಯನ ಮಾಡುವ ಸನ್ನಿವೇಶವನ್ನು ನಿರ್ಮಾಣ ಮಾಡಿಕೊಂಡ. ಆಗ ತನ್ನ ಆ ವರ್ಷದ ಮರು ಅಧ್ಯಯನದ ಪ್ರಾರಂಭಕ್ಕೆ ತಮ್ಮ ಮಕ್ಕಳ ಜೊತೆಗೆ ಅವರ ಗುರುಕುಲದಲ್ಲಿ ತಾನೂ ಉಪಾಕರ್ಮವನ್ನು ಆಚರಿಸಿದ. ಅಲ್ಲಿಗೆ ಬಹಳ ಮಂದಿ ಗ್ರಹಸ್ಥರೂ ಕೂಡಾ - ವಟುಗಳಂತೆ- ಪ್ರತಿ ವರ್ಷ ಉಪಾಕರ್ಮವನ್ನು ಆಚರಿಸುವಂತಾಯಿತು.

ಈಗಿನ ಯುವಕರು ತಮ್ಮ ಉಪನಯನವಾದ ನಂತರ ಮುಂಚಿನ ಹಾಗೆ ಗುರುಕುಲದಲ್ಲಿ ವೇದಾಭ್ಯಾಸವನ್ನು ಮಾಡುವ ಒತ್ತಡದಲ್ಲಿ ಇಲ್ಲ. ವೇದ ಅಂದರೆ ಜ್ಞಾನ. ಜ್ಞಾನದ ಅಧ್ಯಯನವು ವಿಶಾಲವಾಗಿ ಇಂದು ಬೆಳೆದಿದೆ. ಅದು ಆಧುನಿಕವಾಗಿ ಇಂಜನಿಯರಿಂಗ್, ವೈದ್ಯ , ಸಾಮಾಜಿಕ, ಆರ್ಥಿಕ ಹೀಗೆ ಇನ್ನೂ ಅನೇಕ ಶಾಖೆಗಳಾಗಿ ಮುಂದುವರೆದಿವೆ. ಆ ಕ್ಷೇತ್ರಗಳಿಗೆ ಸಹಜವಾಗಿ ಇಂದಿನ ಯುವಕರು ಹೋಗುತ್ತಿದ್ದಾರೆ. ಅಂದಿನಂತೆ ಗುರುಕುಲದ ಬದಲಿಗೆ ಕೆಲವು ವೇದಾಧ್ಯಯನದ ಕೇಂದ್ರಗಳು ಅಲ್ಲಲ್ಲಿ ಇವೆ. ಕೆಲವೇ ಮಂದಿ ಅಲ್ಲಿಗೆ ವೇದಾಧ್ಯಯನಕ್ಕೆ ಹೋದರೂ ಅಲ್ಲಿ ವಿಧ್ಯಾಭ್ಯಾಸದ ಪ್ರಾರಂಭದಲ್ಲಿ ಹಿಂದಿನ ಅರ್ಥದಲ್ಲಿ ಉಪಾಕರ್ಮ ವ್ರತವನ್ನು ಆಚರಿಸಿಕೊಳ್ಳುವ ಕ್ರಮ ಇಲ್ಲವಾಗಿದೆ.

ಆಗಿನ ಕಾಲದಲ್ಲಿ ನಡೆಯುತ್ತಿದ್ದ ಉಪಾಕರ್ಮದ ವ್ರತ ತನ್ನ ಉದ್ದೇಶ ಮತ್ತು ಆಚರಣೆಯನ್ನು ಕಳೆದುಕೊಂಡಿದೆ. ಇದು ಇಂದು ಕೇವಲ ಜನಿವಾರವನ್ನು ಬದಲಾಯಿಸಿಕೊಳ್ಳುವ ಗಂಡಸರ ಒಂದು ಹಬ್ಬವಾಗಿ ಉಳಿದುಕೊಂಡಿದೆ.


ಎಂ. ಗಣಪತಿ ಕಾನುಗೋಡು.
ಸಾಗರ. ಶಿವಮೊಗ್ಗ ಜಿಲ್ಲೆ

ತಾರೀಖು : 3 - 8 - 2020


ಗ್ರಂಥ ಋಣ : 1. ಸಂಸ್ಕಾರ ಮಹೋದಧಿ -- ಡಾ| ಅನಂತನರಸಿಂಹಾಚಾರ್
2. ಹಿಂದೂ ಸಂಸ್ಕಾರಗಳು -- ಪ್ರೊ. ಎಂ ಎ ಹೆಗಡೆ. 3. ಭಾರತೀಯರ ಹಬ್ಬ ಹರಿದಿನಗಳು -- ಶ್ರೀ ಶ್ರೀ ಶ್ರೀರಂಗಪ್ರಿಯ ಶ್ರೀ ಶ್ರೀ .

No comments:

Post a Comment

Note: only a member of this blog may post a comment.