Tuesday 18 August 2020

## ಯಯಾತಿ ##


ಯಯಾತಿಯು ಚಂದ್ರವಂಶದ ರಾಜ. ನಹುಷನ ಮಗ. ಈತನಿಗೆ ಇಬ್ಬರು ಪತ್ನಿಯರು. ಹಿರಿಯ ಪತ್ನಿಯು ಶುಕ್ರಾಚಾರ್ಯರ ಮಗಳಾದ ದೇವಯಾನಿ. ಎರಡನೇ ಪತ್ನಿಯು ರಾಕ್ಷಸ ರಾಜನಾದ ವೃಷಪರ್ವನ ಮಗಳು ಶರ್ಮಿಷ್ಠೆ. ಯಯಾತಿಯು ಈ ಇಬ್ಬರು ಪತ್ನಿಯರಲ್ಲದೆ ವಿಸ್ವಾಚಿ ಎನ್ನುವ ಅಪ್ಸರ ಸ್ತ್ರೀಯನ್ನೂ ತನ್ನ ಪತ್ನಿಯಂತೆ ರಮಿಸುತ್ತಾ ಇದ್ದ.
ದೇವಯಾನಿಗೆ ಯದು ಮತ್ತು ತುರ್ವಸು ಎನ್ನುವ ಒಬ್ಬರು ಮಕ್ಕಳು. ಶರ್ಮಿಷ್ಟೆಗೆ ದ್ರುಹ್ಯು, ಅನು ಮತ್ತು ಪೂರು ಎನ್ನುವ ಮೂರು ಗಂಡುಮಕ್ಕಳು.ಮಾಧವಿ ಎನ್ನುವ ಹೆಣ್ಣುಮಗಳು.

ಶುಕ್ರಾಚಾರ್ಯರ ಮಗಳು ದೇವಯಾನಿಯೂ ರಾಕ್ಷಸರಾಜನಾದ ವೃಷಪರ್ವನ ಮಗಳು ಶರ್ಮಿಷ್ಟೆಯು ತಮ್ಮ ವಿವಾಹ ಪೂರ್ವದಲ್ಲಿಯೇ ಪರಸ್ಪರ ಪರಿಚಯದವರಾಗಿದ್ದರು. ಒಂದು ದಿನ ಅವರಿಬ್ಬರೂ ತಮ್ಮ ಸೀರೆಗಳನ್ನು ಬಿಚ್ಚಿ ಕಾಡಿನಲ್ಲಿರುವ ಕೊಳದ ದಡದಲ್ಲಿಟ್ಟು ಜಲಕ್ರೀಡೆಯಾಡುತ್ತಿರುವಾಗ ಇಂದ್ರನು ಗಾಳಿಯ ರೂಪದಿಂದ ಬಂದು ಎಲ್ಲಾ ಸೀರೆಗಳನ್ನೂ ಒಟ್ಟು ಮಾಡಿದ. ಜಲಕ್ರೀಧೆಯಾಡಿ ಮೊದಲು ಮೇಲೆ ಬಂದ ಶರ್ಮಿಷ್ಟೆಯು ತಿಳಿಯದೆ ದೇವಯಾನಿಯ ಸೀರೆಯನ್ನುಟ್ಟಳು. ಇದರಿಂದ ದೇವಯಾನಿಗೆ ಕೋಪ ಬಂದು ಶರ್ಮಿಷ್ಟೆಯನ್ನು ರಾಕ್ಷಸ ಸ್ತ್ರೀಯೆಂದು ಜರೆಯುತ್ತಾಳೆ. ಕೋಪಗೊಂಡ ಶರ್ಮಿಷ್ಟೆಯು ದೇವಯಾನಿಯನ್ನು ಅಲ್ಲೇ ಇರುವ ಒಂದು ಬಾವಿಗೆ ನೂಕಿ ಹೋಗುತ್ತಾಳೆ. ಆಗಷ್ಟೇ ಬೇಟೆಗಾಗಿ ಅಲ್ಲಿಗೆ ಬಂದ ಯಯಾತಿಯು ಅದನ್ನು ಕಂಡು ದೇವಯಾನಿಯನ್ನು ಮೇಲಕ್ಕೆತ್ತಿ ಬದುಕಿಸಿದ. ತನ್ನನ್ನು ಬದುಕಿಸಿದ ಯಯಾತಿಯೇ ತನ್ನನ್ನು ಮದುವೆಯಾಗಬೇಕೆಂದು ಅವನಲ್ಲಿ ದೇವಯಾನಿಯು ಒತ್ತಾಯಿಸಿ ಅವನ ಒಪ್ಪಿಗೆ ಪಡೆದು ಮನೆಗೆ ಬಂದಳು. ಶರ್ಮಿಷ್ಟೆಯು ತನಗೆ ಮಾಡಿದ ಅಪರಾಧವನ್ನು ತನ್ನ ತಂದೆ ಶುಕ್ರಾಚಾರ್ಯರಿಗೆ ತಿಳಿಸಿದಳು. ಅವರು ಅದನ್ನು ವೃಷಪರ್ವರಾಜನಿಗೆ ತಿಳಿಸಿದರು. ವೃಷಪರ್ವನು ದೇವಯಾನಿಯ ಅಭಿಪ್ರಾಯದಂತೆ ತನ್ನ ಮಗಳನ್ನು ಅವಳು ಮಾಡಿದ ತಪ್ಪಿಗಾಗಿ ದೇವಯಾನಿಯ ದಾಸಿಯನ್ನಾಗಿ ಮಾಡಿದ. ಮುಂದೆ ದೇವಯಾನಿ ಮತ್ತು ಯಯಾತಿಯ ವಿವಾಹವಾಯಿತು. ದಾಸಿಯಾಗಿದ್ದ ಶರ್ಮಿಷ್ಟೆಯೂ ದೇವಯಾನಿಯ ಜೊತೆಗೆ ಯಯಾತಿಯ ಅರಮನೆಗೆ ಹೋದಳು. ಮುಂದೆ ದೇವಯಾನಿಗೆ ಯಯಾತಿಯಿಂದ ಎರಡು ಮಕ್ಕಳಾದರು.
ದೇವಯಾನಿಯ ದಾಸಿಯಾದ ಶರ್ಮಿಷ್ಟೆಯೂ ದೇವಯಾನಿಗೆ ತಿಳಿಯದಂತೆ ಯಯಾತಿಯ ದೈಹಿಕ ಸಂಬಂಧವನ್ನು ಬೆಳೆಸಿದಳು. ಅಲ್ಲದೆ ದ್ರುಹು, ಅನು ಮತ್ತು ಪೂರು ಎಂಬ ಮೂರು ಗಂಡು ಮಕ್ಕಳನ್ನು ಯಯಾತಿಯಿಂದ ಪಡೆದಳು. ನಂತರ ಯಯಾತಿಯು ಶರ್ಮಿಷ್ಟೆಯನ್ನೂ ವಿವಾಹವಾದ ಎನ್ನುವ ವಿಚಾರ ಬೇರೆ.
ಯಯಾತಿಯು ತನ್ನ ದಾಸಿ ಶರ್ಮಿಷ್ಠೆಯ ಕಡೆಗೆ ಹೆಚ್ಚು ಪ್ರೀತಿ ತೋರಿದುದರಿಂದ ದೇವಯಾನಿಗೆ ಅವನ ಮೇಲೆ ಸಿಟ್ಟು ಬಂತು. ಆದ್ದರಿಂದ ತನ್ನ ತಂದೆ ಶುಕ್ರಾಚಾರ್ಯರಿಂದ ತನ್ನ ಗಂಡನಾದ ಯಯಾತಿಗೆ ಅಕಾಲ ವೃದ್ಯಾಪ್ಯವು [ ಮುದಿತನ ] ಬರುವಂತೆ ಶಾಪ ಕೊಡಿಸಿದಳು. ಯಯಾತಿಯು ಶಾಪ ವಿಮೋಚನೆಗಾಗಿ ಶುಕ್ರಾಚಾರ್ಯರನ್ನು ಪ್ರಾರ್ಥಿಸಿದ. ನಂತರ ಶುಕ್ರಾಚಾರ್ಯರು ಮುದಿತನವನ್ನು ನಿನ್ನ ಮಕ್ಕಳಿಗೆ ಕೊಟ್ಟು ಅವರಿಂದ ಯೌವನವನ್ನು ಸ್ವೀಕರಿಸು. ಮುಪ್ಪನ್ನು ಸ್ವೀಕರಿಸಿದ ಮಗನಿಗೆ ಸಿಂಹಾಸನವನ್ನು ಕೊಡು ಎಂದರು.
ಶುಕ್ರಾಚಾರ್ಯರ ಸೂಚನೆಯಂತೆ ತನ್ನ ವೃದ್ಯಾಪ್ಯವನ್ನು ಸ್ವೀಕರಿಸುವಂತೆ ಯಯಾತಿಯು ತನ್ನ ಐವರು ಗಂಡುಮಕ್ಕಳಿಗೆ ಹೇಳಿದ. ಶರ್ಮಿಷ್ಠೆಯ ಮೂರನೆಯ ಮಗನಾದ ಪೂರು ಮಾತ್ರ ತನ್ನ ತಂದೆಯ ವೃದ್ಯಾಪ್ಯವನ್ನು ಸಂತೋಷದಿಂದ ಸ್ವೀಕರಿಸಿದ. ತನ್ನ ಯೌವನವನ್ನು ತಂದೆಗೆ ಕೊಟ್ಟ. ಉಳಿದ ಮಕ್ಕಳು ತಂದೆಯ ಮಾತನ್ನು ತಿರಸ್ಕರಿಸಿದರು.ತನ್ನ ಮುದಿತನವನ್ನು ಕೈಗೊಂಡು ತಮ್ಮ ಯೌವನವನ್ನು ತನಗೆ ಕೊಡಲು ಸಮ್ಮತಿಸದ ಆ ನಾಲ್ಕು ಮಕ್ಕಳಿಗೆ ಯಯಾತಿಯು ಶಾಪ ಕೊಟ್ಟ. ಅವನ ಯೌವನವನ್ನು ತನಗೆ ಕೊಟ್ಟ ಪೂರುವಿನ ವಂಶಜರೇ ರಾಜ್ಯಭಾರ ಮಾಡುವಂತೆ ಯಯಾತಿಯು ಅನುಗ್ರಹಿಸಿದನು.ಅಲ್ಲದೆ ಅವನಿಗೆ ವರಗಳನ್ನೂ ಕೊಟ್ಟ.

ಕೆಲವು ಕಾಲದ ನಂತರ ಯಯಾತಿಗೆ ವೈರಾಗ್ಯ ಹುಟ್ಟಿತು.ವಿಷಯ ಸುಖವು ಅದರ ಸೇವನೆಯಿಂದ ಹೆಚ್ಚುತ್ತದೆಯೇ ವಿನಃ ತಗ್ಗುವುದಿಲ್ಲ ಎನ್ನುವ ಸತ್ಯವನ್ನು ಕೊನೆಯಲ್ಲಿ ಕಂಡುಕೊಂಡ.ಅದಕ್ಕಾಗಿ ಪುನಃ ಪೂರುವಿಗೆ ಅವನ ಯೌವನವನ್ನು ಹಿಂದಕ್ಕೆ ಕೊಟ್ಟು ತನ್ನ ಮುದಿತನವನ್ನೇ ಸ್ವೀಕರಿಸಿದ. ವೈರಾಗ್ಯ ತಾಳಿ ವಾನಪ್ರಸ್ಥಾಶ್ರಮವನ್ನು ಕೈಗೊಂಡು ತಪಸ್ಸಿಗಾಗಿ ಅರಣ್ಯಕ್ಕೆ ಹೋದ.

ಯಯಾತಿಯು ಸ್ವರ್ಗಕ್ಕೆ ಹೋದ ಮೇಲೆ ಅಲ್ಲಿದ್ದ ಹಿರಿಯರನ್ನೆಲ್ಲಾ ಕೀಳುದೃಷ್ಟಿಯಿಂದ ನೋಡಲು ಪ್ರಾರಂಭಿಸಿದ. ಸ್ವರ್ಗದ ಸುಖಗಳನ್ನೆಲ್ಲಾ ಅನುಭವಿಸಿ ಕ್ಷೀಣಪುಣ್ಯನಾದ. ಅದರಿಂದಾಗಿ ಮತ್ತೆ ಭೂಮಿಗೆ ಬಿದ್ದ


 ------------

 ಎಂ. ಗಣಪತಿ ಕಾನುಗೋಡು 

ತಾರೀಖು : 10 - 7 -2020

No comments:

Post a Comment

Note: only a member of this blog may post a comment.